ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ತಿರುಗಾಟ ವಿಜೃಂಭಣೆಯಿಂದ ಆರಂಭಗೊಂಡಿದ್ದು, ಈ ಬಾರಿ ನೂತನವಾಗಿ ಏಳನೇ ಮೇಳವನ್ನು ಸೇರಿಸಿರುವುದು ವಿಶೇಷವಾಗಿದೆ. ಮಂಗಳೂರಿನ ಕಟೀಲು ಕ್ಷೇತ್ರದ ರಥಬೀದಿಯ ಸರಸ್ವತಿ ಸದನದಲ್ಲಿ ಮೊದಲ ಪ್ರದರ್ಶನ ನಡೆದಿದ್ದು, ಸಾಮಾನ್ಯವಾಗಿ ಒಂದು ರಂಗಸ್ಥಳದಲ್ಲಿ ಯಕ್ಷಗಾನ ಕಾಣುವ ನಾವು ಇಲ್ಲಿ ಏಳು ರಂಗಸ್ಥಳದಲ್ಲಿ ಹಿಮ್ಮೇಳ, ಮುಮ್ಮೇಳ ಕಲಾವಿದರು ಕಾಣಸಿಗುವುದು ಅಪರೂಪ ತಿರುಗಾಟದ ಆರಂಭದಲ್ಲಿ ಕಲಾವಿದರು ಶ್ರೀ ದೇವಿಯ ಸಮ್ಮುಖದಲ್ಲಿ ಗೆಜ್ಜೆ ಕಟ್ಟಿ ಕುಣಿದ ನಂತರ ರಥಬೀದಿಯ ಏಳು ಸ್ಥಳಗಳಲ್ಲಿ ಪೂರ್ವರಂಗ ಪ್ರದರ್ಶಿಸಿದ್ದು, ಮೇಳಗಳ ಸಂಯುಕ್ತದ ಮೊದಲ ಪ್ರಸಂಗವಾಗಿ ‘ಪಾಂಡವಾಶ್ವಮೇಧ’ವನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಇಂದಿನಿಂದ ಮುಂದಿನ ಆರು ತಿಂಗಳ ಕಾಲ ಏಳು ಮೇಳಗಳು ಕರಾವಳಿಯ ವಿವಿಧ ಭಾಗಗಳಲ್ಲಿ ಯಕ್ಷಗಾನ ಹರಕೆ ಸೇವೆಯನ್ನು ಸಲ್ಲಿಸಲಾಗುತ್ತದೆ.
