
ಚಿಕ್ಕಮಗಳೂರು: ಜಿಲ್ಲೆ ಮೂಡಿಗೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ. ಸುಮಾರು 70ಕ್ಕೂ ಹೆಚ್ಚು ಕಾಡಾನೆಗಳು ಬೀಟಮ್ಮ ಮತ್ತು ಭೀಮ ಹೆಸರಿನ ಆನೆಗಳು ಗುಂಪಾಗಿ ಸಂಚರಿಸುತ್ತಿದ್ದು, ಕಾಫಿ ತೋಟಗಳು ಹಾಗೂ ಭತ್ತದ ಗದ್ದೆಗಳಲ್ಲಿ ವ್ಯಾಪಕ ಹಾನಿ ಉಂಟುಮಾಡುತ್ತಿವೆ. ಕಸ್ಕೆಬೈಲು, ಜಿ.ಹೊಸಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿ, ರೈತರು ಕೃಷಿ ಚಟುವಟಿಕೆ ನಡೆಸಲು ಭಯಪಡುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಲು ಆತಂಕ ವ್ಯಕ್ತಪಡಿಸುತ್ತಿದ್ದು, ಕಾರ್ಮಿಕರಿಗೆ ಕೆಲಸದ ಕೊರತೆಯಿಂದ ಜೀವನ ನಿರ್ವಹಣೆ ಸಂಕಷ್ಟಕರವಾಗಿದೆ. ಈ ಹಿಂದೆ ಕಾಡಾನೆ ದಾಳಿಯಿಂದ ಸಾವು-ನೋವುಗಳೂ ಸಂಭವಿಸಿರುವ ಹಿನ್ನೆಲೆ ಜನರಲ್ಲಿ ಭೀತಿಯ ವಾತಾವರಣ ಮುಂದುವರಿದಿದ್ದು, ಅರಣ್ಯ ಇಲಾಖೆ ಮತ್ತು ಎಲಿಫೆಂಟ್ ಟಾಸ್ಕ್ ಫೋರ್ಸ್ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದರೂ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.





