ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ–ಮಾನವ ಸಂಘರ್ಷ ಮುಂದುವರಿದಿದೆ. ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದ ಪರಿಣಾಮ ಗುರುವಮ್ಮ (45) ಎಂಬ ಮಹಿಳೆ ಗಾಯಗೊಂಡಿದ್ದಾರೆ. ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದಿದ್ದು, ಗಾಯಾಳು ಮಹಿಳೆಯನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಬಳಿಕ ಸ್ಥಳೀಯರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿ.ಹೊಸಳ್ಳಿ ಭಾಗದಲ್ಲೇ ಎರಡು ಕಾಡಾನೆಗಳು ಬೀಡು ಬಿಟ್ಟಿರುವುದಾಗಿ ತಿಳಿದುಬಂದಿದ್ದು, ತಕ್ಷಣವೇ ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
