
ಚಿಕ್ಕಮಗಳೂರು: ಜಿಲ್ಲೆಯ ಮುಂಡೋಳು ಗ್ರಾಮದಲ್ಲಿ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಶಿವಪ್ಪಗೌಡ(65) ಅವರ ಮೇಲೆ ಕಾಡುಕೋಣ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಇತ್ತೀಚೆಗೆ ಈ ಭಾಗದಲ್ಲಿ ಕಾಡಾನೆ ಹಾಗೂ ಕಾಡುಕೋಣಗಳ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ರೈತರು ಜೀವದ ಹಂಗು ತೊರೆದು ಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ಮೋಟಾರ್ ಸ್ಟಾರ್ಟ್ ಮಾಡಲು ತೆರಳಿದ್ದ ವೇಳೆ ಹಿಂಬದಿಯಿಂದ ದಾಳಿ ನಡೆಸಿದ ಕಾಡುಕೋಣ ಅವರ ತೊಡೆ ಮತ್ತು ಬೆನ್ನಿಗೆ ತೀವ್ರ ಗಾಯ ಉಂಟುಮಾಡಿದ್ದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಡುಪ್ರಾಣಿಗಳ ಹಾವಳಿ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದು, ಕಾಡಿನ ವಾಸಸ್ಥಳ ಹಾನಿ, ಆಹಾರ-ನೀರಿನ ಕೊರತೆ ಹಾಗೂ ರೆಸಾರ್ಟ್-ಹೋಮ್ಸ್ಟೇ ಚಟುವಟಿಕೆಗಳಂತಹ ಮಾನವ ಹಸ್ತಕ್ಷೇಪವೇ ಕಾಡುಪ್ರಾಣಿಗಳು ನಾಡಿಗೆ ಬರಲು ಪ್ರಮುಖ ಕಾರಣವಾಗಿದೆ.




