ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ದೇವತೆಯಾಗಿ ಪೂಜಿಸಲಾಗುತ್ತಿದ್ದು, ಮನೆಗೆ ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ತರುತ್ತದೆ ಎಂಬ ನಂಬಿಕೆ ಇದೆ. ಅನೇಕರು ಬೆಳಿಗ್ಗೆ ಮತ್ತು ಸಂಜೆ ತುಳಸಿ ಗಿಡವನ್ನು ಪೂಜಿಸುವ ಪದ್ಧತಿಯನ್ನು ಪಾಲಿಸುತ್ತಾರೆ. ಇಷ್ಟು ಪವಿತ್ರವಾದ ತುಳಸಿ ಗಿಡ ಒಣಗಿದರೆ ಅದನ್ನು ಅಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡ ಹಸಿರಾಗಿ, ಸೊಂಪಾಗಿ ಬೆಳೆಯಬೇಕೆಂದರೆ ಕೇವಲ ಕುಂಡದಲ್ಲಿ ನೀರು ಹಾಕಿದರೆ ಸಾಕಾಗುವುದಿಲ್ಲ. ಸರಿಯಾದ ಆರೈಕೆ ಮತ್ತು ಮುನ್ನೆಚ್ಚರಿಕೆಗಳು ಅಗತ್ಯ. ಅತಿಯಾದ ನೀರು, ಹವಾಮಾನ ಬದಲಾವಣೆ, ತೇವಾಂಶ ಹೆಚ್ಚಳ ಅಥವಾ ಸಮರ್ಪಕ ಸಮರುವಿಕೆ ಇಲ್ಲದಿದ್ದರೆ ಗಿಡದ ಕಾಂಡ ಕೊಳೆಯುವ ಸಾಧ್ಯತೆ ಇದೆ. ತುಳಸಿ ಗಿಡವನ್ನು ಆರೋಗ್ಯಕರವಾಗಿ ಕಾಯ್ದುಕೊಳ್ಳಲು ಅರಿಶಿನ ನೀರನ್ನು ಶಿಲೀಂಧ್ರ ಹಾಗೂ ಕೀಟ ನಿವಾರಣೆಗೆ ಬಳಸಬಹುದು, ಬಳಸಿದ ಚಹಾ ಪುಡಿ ನೈಸರ್ಗಿಕ ಗೊಬ್ಬರವಾಗಿ ಕೆಲಸ ಮಾಡಿ ಎಲೆಗಳನ್ನು ಹಸಿರಾಗಿಸುತ್ತದೆ, ಕರ್ಪೂರ ನೀರು ಕಪ್ಪು ಹುಳುಗಳನ್ನು ದೂರ ಇಡುತ್ತದೆ, ಬೇವಿನ ಎಲೆ ಪುಡಿ ಬೇರುಗಳನ್ನು ಶಿಲೀಂಧ್ರ ಮತ್ತು ಕೀಟಗಳಿಂದ ರಕ್ಷಿಸುತ್ತದೆ, ಹಾಲು–ನೀರು ಮಿಶ್ರಣ ಮಣ್ಣಿನ ತೇವಾಂಶವನ್ನು ಉಳಿಸಿ ಅಗತ್ಯ ಪೋಷಕಾಂಶ ಒದಗಿಸುತ್ತದೆ, ಉರುವಲು ಬೂದಿ ಪೊಟ್ಯಾಸಿಯಮ್ ನೀಡಿ ಗಿಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಬೀಜಗಳು ಕಾಣಿಸಿಕೊಂಡ ತಕ್ಷಣ ಕತ್ತರಿಸುವುದರಿಂದ ಸಸ್ಯವು ಹೊಸ ಕೊಂಬೆಗಳನ್ನು ಬೆಳೆಸಿ ದೀರ್ಘಕಾಲ ಹಸಿರಾಗಿ, ಪೊದೆಯಾಗಿ ಬೆಳೆಯುತ್ತದೆ.
