
ನಂಗೆ ಎಲ್ಲಾದ್ರೂ ಹೋಗೋಣ ಅಂತ ಅನಿಸ್ತಿದೆ ರಾಘು, ಕೆಲೋ ಸಲ ಸತ್ತೇ ಹೋಗಿ ಬೀಡಬೇಕು ಅಂತ ಅನ್ಸುತ್ತೆ, ನನ್ನ ಯಾರೂ ಅರ್ಥಾನೇ ಮಾಡ್ಕೋಳ್ಳೋದಿಲ್ಲ… ಓದುಗ ಹುಡುಗಿಯೊಬ್ಬಳು ಮೊನ್ನೆ ಕಾಲ್ ಮಾಡಿ ಹೀಗೆ ಗೋಳಾಡುತ್ತಿದ್ದಳು. ಆಕೆ ಇನ್ನು ಕಾಲೇಜು ಓದ್ತಾ ಇರೋ ಹುಡುಗಿ, ಅವರ ಮನೆಯಲ್ಲಿ ಈಗಲೇ ಅವಳ ಮದುವೆ ತಯಾರಿ ನಡೆಸುತ್ತಿದ್ದಾರೆ. ಅದೇ ಕಾರಣಕ್ಕೆ ಈ ಹುಡುಗಿ ಗೋಳಾಡುತ್ತಿದ್ದಳು. ಬಹುಶಃ ಇದು ಈ ಹುಡುಗಿಯೊಬ್ಬಳ ಸಮಸ್ಯೆ ಆಗಿರಲಿಕ್ಕಿಲ್ಲ. ವಯಸ್ಸಿಗೆ ಬಂದಿರೋ ಹುಡುಗಿ ಇರೋ ಪ್ರತಿ ಮನೆಯಲ್ಲೂ ಮದುವೆಯ ಕುರಿತು ಆಲೋಚನೆ ಮಾಡುತ್ತಲೇ ಇರುತ್ತಾರೆ. ಅದು ಸಹಜವೂ ಹೌದು. ಮನೆಯಲ್ಲಿ ಸೀರಿಯಸ್ಸಾಗಿ ಹುಡುಗನನ್ನು ಹುಡುಕಾಡುತ್ತಿದ್ದಾರೆ ಎಂಬುದು ಅರಿವಾಗುತ್ತಿದ್ದಂತೆಯೇ ನಾನು ಹೇಳಿದಂತೆ ಕೆಲವು ಹುಡುಗಿಯರು ಗೋಳಾಡುತ್ತಾರೆ. ಹಾಗಂತ ಅವರು ಯಾರನ್ನೋ ಪ್ರೀತಿಸ್ತಿದಾಳೆ ಅಂತ ಅರ್ಥವಲ್ಲ. ಆದ್ರೂ ಮದುವೆ ಅಂದ ತಕ್ಷಣ ಕೆಲವು ಹುಡುಗಿಯರು ಬೇಡ ಅಂತ ಹಠಕ್ಕೆ ಬೀಳುತ್ತಾರೆ, ಅತ್ತ್ತು ಗೋಳಾಡುತ್ತಾರೆ. ಊಟ, ತಿಂಡಿ ಬಿಟ್ಟು ಮಂಕಾಗಿ ಕುಳಿತುಕೊಳ್ಳಲೂಬಹುದು. ತುಂಬಾ ಮನೆಗಳಲ್ಲಿ ಹುಡುಗಿಯರು ಇಂತಹ ವರ್ತನೆ ಮಾಡಿದಾಗ ತಂದೆ ತಾಯಿಯರು ಹೆಚ್ಚು ಆತಂಕಗೊಳ್ಳುತ್ತಾರೆ. ನಮ್ಮ ಮಗಳು ಯಾರನ್ನೋ ಪ್ರೀತಿಸ್ತಿದಾಳೆ ಅನ್ನೋ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಮಗಳ ಮೇಲೆ ಅದೆಷ್ಟೇ ನಂಬಿಕೆ ಇದ್ರು ಮದುವೆ ಬೇಡ ಅಂತ ಹಠ ಮಾಡೋ ಹುಡುಗಿಯನ್ನು ಪ್ರತಿಯೊಬ್ಬ ತಂದೆ ತಾಯಿಯೂ ಇಂಥದ್ದೊಂದು ಅನುಮಾನದ ದೃಷ್ಟಿಯಲ್ಲಿ ನೋಡಿ ಬಿಡುತ್ತಾರೆ. ಈ ಸಂಗತಿ ಹುಡುಗಿಯನ್ನು ಮತ್ತಷ್ಟು ಉರಿದು ಬೀಳುವಂತೆ ಮಾಡುತ್ತದೆ. ಕೆಲವರು ನೀನು ಯಾರನ್ನಾದ್ರು ಪ್ರೀತಿಸ್ತಾ ಇದ್ರೆ ಹೇಳಿ ಬಿಡುಅಂತ ಕೇಳಿ ಬಿಡುತ್ತಾರೆ. ಅದು ಬಾಯಿ ಬಿಡಿಸೋ ತಂತ್ರ! ಆಗ ಹುಡುಗಿಗೆ ನಿಜ ನಾನು ಯಾರನ್ನಾದ್ರು ಪ್ರೀತಿಸಬೇಕಿತ್ತು ಅಂತ ಅನಿಸೋ ಅಪಾಯವಿರುತ್ತದೆ. ಆಗಲೇ ಹುಡುಗಿಗೆ ಎಲ್ಲರಿಂದ ದೂರ ಹೋಗ್ಬೇಕು, ಸತ್ತೇ ಹೋಗಿ ಬಿಡೋಣ ಅಂತೆಲ್ಲಾ ಅನಿಸುವುದು. ದುರಾದೃಷ್ಟವಶಾತ್ ಕೆಲವು ಹುಡುಗಿಯರು ಇಂಥದ್ದೊಂದು ನಿರ್ಧಾರಕ್ಕೆ ಮುಂದಾಗಿಯೇ ಬಿಡುತ್ತಾರೆ! ನಾನು ಇದೇ ಅಂಕಣದಲ್ಲಿ ಈ ಹಿಂದೆ ಬರೆದಿದ್ದೆ. ವಯಸ್ಸಿಗೆ ಬಂದ ಮಗಳು ಸೆರಗಲ್ಲಿ ಕಟ್ಟಿಕೊಂಡ ಕೆಂಡ ಎಂಬಂತೆ. ನಿಜ ಹೆಣ್ಣು ಹೆತ್ತವರಿಗೆ ಆತಂಕವಿರುತ್ತದೆ. ಮಗಳನ್ನು ಮದುವೆ ಮಾಡಿ ಕಳುಹಿಸಿದರೆ ಸಾಕು ನಮ್ಮ ಜವಾಬ್ದಾರಿ ಮುಗಿಯುತ್ತದೆ ಎಂದುಕೊಂಡಿರುತ್ತಾರೆ. ಅವರು ಹಾಗೆ ಅಂದುಕೊಳ್ಳೂವುದು ತಪ್ಪಲ್ಲ. ಆದರೆ ಮಗಳಿಗೆ ಮದುವೆ ಮಾಡಲು ಆಕೆಗೆ ೧೮ ವರ್ಷ ಆಗಿದೆ ಅನ್ನುವುದೊಂದೇ ಅರ್ಹತೆ ಆಗಬಾರದು ಅಲ್ವಾ? ಹೆಣ್ಣು ಹೆತ್ತ ನಿಮ್ಮ ಆತಂಕ ನಿಜವೇ. ಅದರಲ್ಲೂ ಎರಡು, ಮೂರು ಹೆಣ್ಣು ಮಕ್ಕಳಿದ್ದರಂತೂ ಉಳಿದಿಬ್ಬರಿಗೆ ಮದುವೆ ಮಾಡಬೇಕು ಎಂಬ ಕಾರಣಕ್ಕೆ ಆದಷ್ಟು ಬೇಗ ದೊಡ್ಡವಳನ್ನು ಸಾಗ ಹಾಕಲು ಯತ್ನಿಸುತ್ತಾರೆ. ಡಿಗ್ರಿ ಮುಗಿಯುತ್ತಿದ್ದಂತೆಯೇ ಮದುವೆಗೆ ರೆಡಿಯಾಗು ಎಂದಾಗಲೇ ಹುಡುಗಿಯರಿಗೆ ಸಿಟ್ಟು ಬರುವುದು. ನೀವು ನೋಡಿದ ಹುಡುಗ ಶ್ರೀಮಂತ, ವೆಲ್ಸೆಟಲ್ಡ್, ಒಳ್ಳೇ ಫ್ಯಾಮಿಲಿ, ಒಬ್ಬನೇ ಮಗ ಎಲ್ಲವೂ ಹೌದು. ಆದರೂ ನಿಮ್ಮ ಮಗಳು ಒಲ್ಲೆ ಎನ್ನುತ್ತಾಳೆ. ಯಾಕೆ? ಅದನ್ನ ತಿಳಿಯುವ ಆಸಕ್ತಿ ನಮ್ಮಲ್ಲಿ ಯಾವ ತಂದೆ ತಾಯಿಗೂ ಇರುವುದಿಲ್ಲ! ದುರಂತ ಅಂದ್ರೆ ಯಾವ ತಂದೆ ತಾಯಿಗಳು ಕೂಡ ಮಗಳ ಆಸೆ ಏನು? ಅನ್ನೋದನ್ನ ತಿಳಿಯೋ ಗೋಜಿಗೆ ಹೋಗುವುದಿಲ್ಲ. ಕಷ್ಟಪಟ್ಟು ಓದಿ ಡಿಗ್ರಿ ಮಾಡಿಕೊಂಡ ಹುಡುಗಿ ಯಾರೋ ಶ್ರೀಮಂತ ಕಟ್ಟುವ ತಾಳಿ ಎಂಬ ಸರಪಳಿಯಲ್ಲಿ ಬಂಧಿಯಾಗಿ ಅವನ ಸೇವೆ ಮಾಡಲು ಸಿದ್ದಳಿರುವುದಿಲ್ಲ. ಮದ್ವೆ ಬ್ಯಾಡ ಅಂತ ಹಠಕ್ಕೆ ಬಿದ್ದ ಮಗಳನ್ನು ಕೂರಿಸಿ ಆತ್ಮೀಯವಾಗಿ ಮಾತಾಡಿ ನೋಡಿ ನಿನ್ನ ಕನಸೇನು.., ಯಾವಾಗ ಮದ್ವೆ ಆಗೋ ಆಲೋಚನೆ ಇದೆ ಅಂತ ಅವಳನ್ನೇ ಕೇಳಿ.. ಇಷ್ಟು ಓದಿರೋ ನಾನು ಎಲ್ಲಾದ್ರು ಕೆಲ್ಸಕ್ಕೆ ಸೇರಿ ಅಮ್ಮನಿಗೊಂದು ಓಲೆ ಮಾಡಿಸಿಕೊಡಬೇಕು, ತಂಗಿಯ ಓದಿಗೆ ಹೆಲ್ಪ್ ಮಾಡಬೇಕು, ಅಪ್ಪಂಗೆ ಹೆಲ್ಪ್ ಮಾಡಬೇಕು ಅನ್ನೋ ಕನಸನ್ನ ಅವರು ಎಸ್.ಎಸ್.ಎಲ್.ಸಿ ಯಲ್ಲಿದ್ದಾಗಲೇ ಕಾಣುತ್ತಿರುತ್ತಾರೆ. ಅದನ್ನೆಲ್ಲಾ ಭಗ್ನಗೊಳಿಸುವಂತೆ ಮದ್ವೆ ಅಂದ್ರೆ ಯಾರಿಗೆ ತಾನೇ ಕೋಪ ಬರಲ್ಲ ಹೇಳಿ.. ಮಗಳು ಒಂದೆರಡು ವರ್ಷ ಮನೆಯಲ್ಲಿದ್ರೆ ನಿಮ್ಗೆ ಹೊರೆ ಆಗಲ್ಲ ಅಲ್ವಾ..? ಹಿಂದಿನಂತೆ ಹೆಣ್ಣಿಗೆ ಮದ್ವೆ ಮಾಡೋದು ಕಷ್ಟವಲ್ಲ! ಇನ್ನೂ ನೆಂಟರಿಷ್ಟರೂ ಆಡಿಕೊಳ್ತಾರೆ ಅಂತನಾ.. ಬಿಡಿ, ಅವರೇನು ನಿಮ್ಮ ಮಗಳಿಗೆ ಅನ್ನ ಹಾಕಬೇಕಿಲ್ಲ ತಾನೇ! ನೀವು ನಿಮ್ಮ ಮಗಳ ಭಾವನೆಗೆ ಬೆಲೆ ಕೊಡಿ. ಹುಡುಗಿಯರಾದರೂ ಅಷ್ಟೇ. ತಂದೆ ತಾಯಿಗಳ ಮುಂದೆ ತಮ್ಮ ನಿರ್ಧಾರ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿ ಬಿಡಬೇಕು. ಅತ್ತೂ ಕರೆದು ರಂಪಾಟ ಮಾಡೋ ಬದಲು ನಿಮ್ಮ ತಾಕತ್ತಿನ ಬಗ್ಗೆ ನಿಮ್ಮ ಮನೆಯವರಿಗೆ ಕಾನ್ಫಿಡೆನ್ಸ್ ಬರೋ ಹಾಗೆ ವರ್ತಿಸಿ. ನಿಮ್ಮ ಅಪ್ಪ ಅಮ್ಮನನ್ನು ಕನ್ವಿನ್ಸ್ ಮಾಡೋಕೆ ಆಗದೇ ಇರುವಷ್ಟು ದುರ್ಬಲರು ನೀವಲ್ಲಾ ಅಂತ ನಂಗೊತ್ತು. ಏನಂತೀರಾ..?




