ಚಿಕ್ಕಮಗಳೂರು: ಪಶ್ಚಿಮಘಟ್ಟಗಳ ತಪ್ಪಲಿನ ಚಂದ್ರದ್ರೋಣ ಪರ್ವತಗಳ ದಟ್ಟ ಶೋಲಾ ಕಾಡಿನಲ್ಲಿ ಪ್ರವಾಸಿಗರ ನಿರ್ಲಕ್ಷ್ಯ ಮತ್ತೆ ಬೆಳಕಿಗೆ ಬಂದಿದ್ದು, ಎಳೇ ಮಕ್ಕಳನ್ನೂ ಒಳಗೊಂಡ 28 ಜನರ ತಂಡ ದಟ್ಟ ಅರಣ್ಯದ ಮಧ್ಯೆ ಅನಧಿಕೃತವಾಗಿ ಪ್ರವಾಸಕ್ಕೆ ತೆರಳಿದ್ದಾರೆ. ದತ್ತಪೀಠದ ತಪ್ಪಲಿನ ಅಡವಿಯಲ್ಲಿ ನಾಪತ್ತೆಯಾಗಿದ್ದ ಕೇರಳ ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದ ಪೊಲೀಸ್, ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಗೆ ಈ ತಂಡ ಸಿಕ್ಕಿದ್ದು, ಶೋಧ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಸಿಬ್ಬಂದಿಗೆ ಹೆಚ್ಚುವರಿ ತೊಂದರೆ ಉಂಟುಮಾಡಿದ್ದು, ರಸ್ತೆ ಮಾರ್ಗ ಬಿಟ್ಟು ಅಪಾಯಕಾರಿ ಕಾಡಿನಲ್ಲಿ ಸಂಚರಿಸುವ ಈ ರೀತಿಯ ವರ್ತನೆ ಪ್ರಶ್ನೆಗೆ ಕಾರಣವಾಗಿದ್ದು, ಸಾವಿರಾರು ಪ್ರಾಣಿಗಳಿರುವ ದಟ್ಟ ಅರಣ್ಯದಲ್ಲಿ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂಬ ಆತಂಕ ವ್ಯಕ್ತವಾಗುತ್ತಿದೆ. ಪಶ್ಚಿಮಘಟ್ಟಗಳ ಸಂವೇದನಾಶೀಲ ಪ್ರದೇಶಗಳಲ್ಲಿ ಇಂತಹ ನಿರ್ಲಕ್ಷ್ಯ ಪ್ರವಾಸವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ.
