
ಬೆಂಗಳೂರು: ಆರೋಗ್ಯವೇ ಭಾಗ್ಯ ಎಂಬ ಹಿರಿಯರ ಮಾತು ನಮ್ಮ ಅನುಭವಕ್ಕೆ ಬರುವುದು ನಮ್ಮ ಆರೋಗ್ಯ ಸಮಸ್ಯೆ ಬಂದಾಗ ಮಾತ್ರ, ಏಕೆಂದರೆ ಜಗತ್ತಿನಲ್ಲಿ ಅದೆಷ್ಟೋ ಮಂದಿ ದುಶ್ಚಟಗಳಿಗೆ ಬಲಿಯಾಗಿ ಪ್ರಾಣವನ್ನೇ ತೆತ್ತಿದ್ದಾರೆ, ಇನ್ನೆಷ್ಟೋ ಮಂದಿ ತಮ್ಮ ಜೀವನವನ್ನೇ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಮನುಷ್ಯ ಸಕಾರಾತ್ಮಕ ವಿಷುಗಳಿಗಿಂತ ನಕಾರಾತ್ಮಕ ವಿಷಯಗಳ ಬಗ್ಗೆ ಆಸಕ್ತಿ ತೋರುವುದು ಸಹಜ. ಅದರಲ್ಲೂ ಈ ತಂಬಾಕು ಸೇವನೆಯಂತ ಚಟಗಳಿಂದ ಜೀವನ ನಷ್ಟವಷ್ಟೇ ಆಲ್ಲ, ಆರ್ಥಿಕ ನಷ್ಟವೂ ಆಗುತ್ತದೆ. ಈ ಕುರಿತು ಸರ್ಕಾರ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿದ್ದರೂ ಅದರ ಸೇವನೆ ಕಡಿಮೆಯಾಗಿಲ್ಲ. ಹೀಗಾಗಿ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಸರ್ಕಾರಿ ಕಛೇರಿಗಳಲ್ಲಿ ಹಾಗೂ ಕಛೇರಿ ಆವರಣಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಇತರೆ ತಂಬಾಕು ಉತ್ಪನ್ನಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು, ೨೦೨೧ರ ನಿಯಮ-೩೧ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯ ಅಥವಾ ಮಾದಕ ವಸ್ತುವನ್ನು ಸೇವಿಸುವುದನ್ನು ಕೂಡ ನಿಷೇಧಿಸಿದೆ. ಶಾಸನಾತ್ಮಕ ಎಚ್ಚರಿಕೆಗಳ ಹೊರತಾಗಿಯೂ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಕಛೇರಿಯ ಆವರಣದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರನ್ನು ಹಾಗೂ ಸರ್ಕಾರಿ ಸಿಬ್ಬಂದಿಗಳನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಈ ಸೂಚನೆಗಳನ್ನು ಉಲ್ಲಂಘಿಸಿ ಯಾವುದೇ ಸರ್ಕಾರಿ ನೌಕರ ಕಛೇರಿಯಲ್ಲಿ ಅಥವಾ ಕಛೇರಿಯ ಆವರಣದಲ್ಲಿ ಧೂಮಪಾನ ಮಾಡುವುದು ಮತ್ತು ಯಾವುದೇ ತಂಬಾಕು ಉತ್ಪನ್ನಗಳನ್ನು (ಗುಟ್ಕಾ, ಪಾನ್ ಮಸಾಲ, ಹೊಗೆಸೊಪ್ಪು,ಇತ್ಯಾದಿ) ಸೇವಿಸುವುದು ಕಂಡುಬಂದಲ್ಲಿ ಅಂತಹ ನೌಕರರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಇಡೀ ಪ್ರಪಂಚದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ತಂಬಾಕು ಸೇವನೆಯಿಂದ ಜಾಗತಿಕವಾಗಿ ಪ್ರತಿವರ್ಷ ಸಾಯುವವರ ಸಂಖ್ಯೆ ೭೦ಲಕ್ಷಕ್ಕಿಂತ ಅಧಿಕ. ಭಾರತದಲ್ಲಿ ೧೦ ಲಕ್ಷ ಜನರು ಬೀಡಿ, ಸಿಗರೇಟ್, ತಂಬಾಕಿನ ನೇರ ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಈ ಪ್ರಮಾಣ ೮ ಸಾವಿರ. ಈಶಾನ್ಯ ರಾಜ್ಯಗಳಲ್ಲಿ ಶೇ. ೭೦ರಷ್ಟು ಮಂದಿ ಧೂಮಪಾನಕ್ಕೆ ದಾಸರಾಗಿದ್ದಾರೆ. ತಂಬಾಕು ಸೇವೆನೆಯಿಂದ ಕೇವಲ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ನಮ್ಮ ದೇಹದ ಪ್ರತಿಯೊಂದು ಜೀವ ಕೋಶದ ಮೇಲೆ ಅದು ಮಾರಕ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಜನರೇ ಇದರ ಕುರಿತು ಮನವರಿಕೆ ಮಾಡಿಕೊಂಡು ಆರೋಗ್ಯದ ಕುರಿತು ಕಾಳಜಿ ಮಾಡಬೇಕಾದ ಅವಶ್ಯಕತೆಯಿದೆ.