ಕೊಟ್ಟಿಗೆಹಾರ: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಮೂರು ದಿನಗಳ ಕಾಲ ನಡೆದ ಛಾಯಾಗ್ರಹಣ ಕಾರ್ಯಾಗಾರದಲ್ಲಿ ಬೆಂಗಳೂರು, ಮೈಸೂರು, ಗದಗ, ತುಮಕೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 25 ಶಿಬಿರಾರ್ಥಿಗಳು ಭಾಗವಹಿಸಿ, ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಆನಂದ್ ಕುಮಾರ್ ಮತ್ತು ಹೊಸೆಪೇಟೆಯ ಪಂಪಯ್ಯ ಮಳೇಮಠ ಅವರಿಂದ ಬೇಸಿಕ್ ಫೋಟೋಗ್ರಫಿ, ಲ್ಯಾಂಡ್ಸ್ಕೇಪ್ ಛಾಯಾಗ್ರಹಣ, ಕ್ಯಾಮೆರಾ ಬಳಕೆ, ಸಂಯೋಜನೆ ಹಾಗೂ ಫೋಟೋ ಎಡಿಟಿಂಗ್ ಕುರಿತು ತರಬೇತಿ ಪಡೆದರು. ಕಾರ್ಯಾಗಾರದ ಮೊದಲ ದಿನ ಮೂಡಿಗೆರೆ ಸಂತೆಗೆ ಭೇಟಿ ನೀಡಿ ಜನಜೀವನ, ಜನರ ಮುಖಭಾವ, ವರ್ಣರಂಜಿತ ಸಂತೆ ದೃಶ್ಯಗಳು, ವ್ಯಾಪಾರಿಗಳ ಚಟುವಟಿಕೆಗಳು, ಹೂ ಮಾರುವ ವೃದ್ಧೆ, ತರಕಾರಿ ವ್ಯಾಪಾರಿ, ಮೀನು ಕತ್ತರಿಸುವ ಯುವಕ, ಬೋಂಡ ಕರಿಯುವ ಮಹಿಳೆ ಸೇರಿದಂತೆ ವಿಭಿನ್ನ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರೆ, ತೇಜಸ್ವಿ ಮನೆ ನಿರುತ್ತರಕ್ಕೆ ಭೇಟಿ ನೀಡಿ ಅವರ ಬದುಕಿನ ಪರಿಸರದಲ್ಲಿ ಹಕ್ಕಿ, ಚಿಟ್ಟೆ, ಹೂವುಗಳ ಚಿತ್ರಗಳನ್ನು ಕ್ಲಿಕ್ ಮಾಡಿದರು. ಎರಡನೇ ದಿನ ದೇವರಮನೆಗೆ ಬೆಳಗ್ಗೆಯೇ ತೆರಳಿ ಮಂಜಿನ ಹೊದಿಕೆಯೊಳಗಿನ ಬೆಟ್ಟಸಾಲುಗಳು, ಹಸಿರು ಕಣಿವೆಗಳ ನಿಸರ್ಗ ಸೌಂದರ್ಯವನ್ನು ಲ್ಯಾಂಡ್ಸ್ಕೇಪ್ ಛಾಯಾಗ್ರಹಣದ ಮೂಲಕ ಸೆರೆಹಿಡಿದು, ಮಾರ್ಗದರ್ಶಕರಿಂದ ತಕ್ಷಣದ ಸಲಹೆಗಳನ್ನು ಪಡೆದುಕೊಂಡರು. ಮೂರನೇ ದಿನ ಬಣಕಲ್ ವಿಲೇಜ್ನಲ್ಲಿ ಹಕ್ಕಿ ಮತ್ತು ಮ್ಯಾಕ್ರೋ ಛಾಯಾಗ್ರಹಣ ನಡೆಸಿ ಕೀಟ-ಪಕ್ಷಿಗಳ ಚಿತ್ರಗಳನ್ನು ಸೆರೆಹಿಡಿಯುವ ಜೊತೆಗೆ ಅವುಗಳ ಹೆಸರು ಹಾಗೂ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಂಡು, ಕಾಜಾಣ, ಕಿಂಗ್ ಪಿಷರ್, ಬೂದು ಮಂಗಟ್ಟೆ ಮುಂತಾದ ಪಕ್ಷಿಗಳ ಫೋಟೋಗಳನ್ನು ಕ್ಲಿಕ್ ಮಾಡಿದರು. ಅಂತಿಮವಾಗಿ ಶಿಬಿರಾರ್ಥಿಗಳು ತೆಗೆದ ಚಿತ್ರಗಳನ್ನು ವಿಶ್ಲೇಷಿಸಿ ತಾಂತ್ರಿಕ ಅಂಶಗಳು ಹಾಗೂ ದೃಷ್ಟಿಕೋನ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡಲಾಯಿತು. ತೇಜಸ್ವಿಯವರ ಸಾಹಿತ್ಯ, ಪರಿಸರ ಪ್ರಜ್ಞೆ ಮತ್ತು ಫೋಟೋಗ್ರಫಿಯ ಮೇಲಿನ ಆಳವಾದ ಆಸಕ್ತಿಯನ್ನು ಯುವ ಫೋಟೋಗ್ರಾಫರ್ಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜನೆಯಾಗಿದ್ದು, ಫೋಟೋಗ್ರಫಿಯನ್ನು ಪ್ರಕೃತಿಯೊಂದಿಗೆ ಸಂವಾದದ ಮಾಧ್ಯಮವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸುವಲ್ಲಿ ಇದು ಸಹಾಯಕವಾಗಿದೆ ಎಂದು ಆನಂದ್ ಕುಮಾರ್ ಅಭಿಪ್ರಾಯಪಟ್ಟರೆ, ಪಂಪಯ್ಯ ಮಳೇಮಠ ಅವರು ಫೋಟೋಗ್ರಫಿ ಮೂಲಕ ಜೀವಜಗತ್ತಿನತ್ತ ಕುತೂಹಲ, ಕಾಳಜಿ ಹಾಗೂ ನೈಸರ್ಗಿಕ ಅರಿವು ಹೆಚ್ಚುತ್ತದೆ ಎಂದು ತಿಳಿಸಿದರು.
