
ಕೊಟ್ಟಿಗೆಹಾರ: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಏಪ್ರಿಲ್ 3ರಿಂದ 5ರವರೆಗೆ ಮೂರು ದಿನಗಳ ಛಾಯಾಗ್ರಹಣ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ. ಸಿ. ರಮೇಶ್ ತಿಳಿಸಿದ್ದಾರೆ.
ಏಪ್ರಿಲ್ 3ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಾಗಾರಕ್ಕೆ ಉದ್ಘಾಟನೆ ನಡೆಯಲಿದ್ದು, ಸಂತೆ ಹಾಗೂ ಗ್ರಾಮ್ಯ ಬದುಕಿನ ಛಾಯಾಗ್ರಹಣ ಕುರಿತ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತದೆ. ಎರಡನೇ ದಿನವಾದ ಏಪ್ರಿಲ್ 4ರಂದು ಪ್ರಕೃತಿ ನಡಿಗೆ ಆಯೋಜಿಸಲಾಗಿದ್ದು, ನೈಸರ್ಗಿಕ ಬೆಳಕಿನ ಬಳಕೆ ಮತ್ತು ಹೊರಾಂಗಣ ಛಾಯಾಗ್ರಹಣದ ತಂತ್ರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ.
ಮೂರನೇ ದಿನ ಏಪ್ರಿಲ್ 5ರಂದು ಹೂವುಗಳು, ಹಕ್ಕಿಗಳು ಮತ್ತು ಕೀಟಗಳ ವೀಕ್ಷಣೆ ಜೊತೆಗೆ ಮ್ಯಾಕ್ರೋ ಛಾಯಾಗ್ರಹಣದ ವಿವರವಾದ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಬೆಂಗಳೂರಿನ ಆನಂದ್ ಕುಮಾರ್ ಹಾಗೂ ಹೊಸಪೇಟೆಯ ಪಂಪಯ್ಯ ಮಳೇಮಠ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಮೊದಲ 25 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಆಸಕ್ತರು ನಿಗದಿತ ಶುಲ್ಕ ಪಾವತಿಸಿ ಮುಂಗಡ ನೊಂದಣಿ ಮಾಡಿಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ 9663098873 ಅಥವಾ 9449309067 ಸಂಖ್ಯೆಯನ್ನು ಸಂಪರ್ಕಿಸಬಹುದು.





