
ಚಿಕ್ಕಮಗಳೂರು: ಒಂದು ದೇಶ ಅಭಿವೃದ್ದಿಯಾಗಬೇಕಾದರೆ ರಸ್ತೆ ಅಭಿವೃದ್ದಿಯಾಗಬೇಕು ಅಷ್ಟೇ ಅಲ್ಲದೇ, ಅದು ಮಾನವನ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಆದರೆ ಕಾಫಿನಾಡು ಚಿಕ್ಕಮಗಳೂರು ನಗರದ ವಿಜಯಪುರದ ಜನರು ಆ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ. ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಮೊದಲು ಕಾಮಗಾರಿಗೆ ಗುಂಡಿ ತೆಗೆಯಲಾಗಿತ್ತು. ನಂತರ ಗುಂಡಿ ಮುಚ್ಚಿದ್ದರೂ ಮತ್ತೆ ರಸ್ತೆ ಗುಂಡಿಯಾಗಿತ್ತು. ಇದರಿಂದ ಹಲವು ಬೈಕ್ ಅಪಘಾತ ನಡೆದ ವರದಿ ಕೂಡ ದಾಖಲಾಗಿವೆ. ಈ ಬಗ್ಗೆ ಗುಂಡಿ ಮುಚ್ಚುವಂತೆ ಹಲವು ಬಾರಿ ನಗರಸಭೆಗೆ ಮನವಿ ಮಾಡಿದರು ನಗರ ಸಭೆ ಅಧಿಕಾರಿಗಳು ಕ್ಯಾರೇ ಅಂದಿರಲಿಲ್ಲ. ಇದೀಗ ಅಧಿಕಾರಿಗಳ ವರ್ತನೆಗೆ ಬೇಸತ್ತ ಸಾರ್ವಜನಿಕರು ರಸ್ತೆಯಲ್ಲಿರುವ ಗುಂಡಿಗೆ ಪೂಜೆ ಮಾಡಿ ಪಲಾವ್, ವಡೆ, ನಿಂಬೆಹಣ್ಣು ಹೂವು, ಬ್ಯಾರಿಕೇಡ್ ಇಟ್ಟು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.