
ಚಿಕ್ಕಮಗಳೂರು: ನ್ಯಾಯಕ್ಕಾಗಿ ಕಾಂಗ್ರೆಸ್ ಮಹಿಳಾ ಮುಖಂಡೆ ಪ್ರಧಾನಿ ಕಚೇರಿಗೆ ದೂರು ನೀಡಿದ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ನಗರದ ಚೇತನಾ ಎಂಬ ಕಾಂಗ್ರೆಸ್ ಮುಖಂಡೆ, ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಷರೀಫ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವಾಲಯ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಚೇತನಾ ಅವರ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗೆ ವಾಸವಾಗಿದ್ದ ರಾಹಿಲ್ ಷರೀಫ್, ಮಹಿಳೆಯೊಬ್ಬರ ಜೊತೆಗಿದ್ದ ಫೋಟೋ ವೈರಲ್ ಆದ ಬಳಿಕ ಅದನ್ನು ಚೇತನಾಳೇ ವೈರಲ್ ಮಾಡಿದ್ದಾಳೆ ಎಂದು ಆರೋಪಿಸಿ, ಆಕೆಯ ಮನೆ ಬಳಿ ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಚೇತನಾ ಅವರ ಗಂಡನ ಕೈಗೆ ಗಾಯವಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ರಾಹಿಲ್ ಷರೀಫ್ ತನ್ನ ಮೊಬೈಲ್ನಲ್ಲಿ ಹಲವು ಹಿಂದೂ ಮಹಿಳೆಯರ ಜೊತೆಗಿನ ಫೋಟೋಗಳನ್ನು ಇಟ್ಟುಕೊಂಡು ಅವರನ್ನು ಬ್ಲಾಕ್ಮೇಲ್ ಮಾಡುತ್ತಾನೆ ಎಂಬ ಆರೋಪವೂ ಮಾಡಲಾಗಿದೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿರುವ ಚೇತನಾ, ನ್ಯಾಯಕ್ಕಾಗಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಹಲವು ಗಲಾಟೆ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿರುವ ರಾಹಿಲ್ ಷರೀಫ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.





