ನಮ್ಮ ಹಿರಿಯರು ಆಡುವ ಮಾತಿಗೆ ಬಹಳ ಆಳವಾದ ಅರ್ಥವಿರುತ್ತದೆ… ನಮ್ಮ ಅಜ್ಜಿ ಹೇಳುತ್ತಿದ್ದರು, ವಯಸ್ಸಿಗೆ ಬಂದಿರೋ ಮಗಳು ಮನೇಲಿದ್ದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ ಎಂದು. ಕೆಲವು ಸಲ ಹಾಗೇ ಕಟ್ಟಿಕೊಂಡ ಕೆಂಡ ಒಬ್ಬರ ಮನೆಯ ಮರ್ಯಾದೆಯನ್ನೇ ಸುಟ್ಟು ಬಿಡುತ್ತದೆ. ಅಲ್ಲಾ ವಯಸ್ಸು ಎಂಬುದು ಪ್ರತಿಯೊಬ್ಬರಿಗೂ ಆಗುತ್ತದೆ. ವಯೋ ಸಹಜ ಬಯಕೆಗಳನ್ನು ನಮ್ಮ ಹಿಡಿತಕ್ಕೆ ತಂದುಕೊಳ್ಳದಷ್ಟು ಬಲಹೀನರಾ ನಾವು? ಪಿಯುಸಿ ಕ್ಲಾಸಿನಲ್ಲಿ ಕುಳಿತಿರೋ ಎಲ್ಲಾ ಹುಡುಗಿಯರಿಗೂ ಹದಿ ಹರಯವೇ! ಒಂದಿಬ್ಬರು ದಾರಿ ತಪ್ಪಬಹುದೇ ಹೊರತು ಇಡೀ ಕ್ಲಾಸಿನ ಹುಡುಗಿಯರೇ ಚಲ್ಲು ಚಲ್ಲಾಗಲು ಸಾಧ್ಯವಿರುವುದಿಲ್ಲ. ಸುಮ್ಮನೆ ನಿಮ್ಮ ಸುತ್ತ ಗಮನಿಸಿ ನೋಡಿ, ಹಾಗೇ ವಯಸ್ಸಿಗೆ ಮೀರಿ ವರ್ತಿಸುವ ಅಥವಾ ಯೌವ್ವನ ಎಂಬುದು ಕೇವಲ ನನ್ನೊಬ್ಬಳ ಸ್ವತ್ತು ಎಂಬ ಭ್ರಮೆಗೆ ಬಿದ್ದಿರುವ ಹೆಣ್ಣು ಮಕ್ಕಳು ಖಂಡಿತವಾಗಿಯೂ ಕಾಣಿಸುತ್ತಾರೆ. ಹಾಗೇ ಅವರ ಕುಟುಂಬದ ಹಿನ್ನಲೆಯನ್ನೂ ಗಮನಿಸಿ, ತೀರಾ ಬಡ ವರ್ಗದರಾಗಿಯೋ ಅವಿದ್ಯಾವಂತ ತಂದೆ-ತಾಯಿಯೋ ಅಥವಾ ತೀರಾ ಹಳ್ಳಿಗಾಡಿನ ಪ್ರದೇಶದಿಂದ ಬಂದವರಾಗಿರುತ್ತಾರೆ. ದುರಂತ ಎಂದರೆ ಬಹಳಷ್ಟು ಜನ ತಂದೆ ತಾಯಂದಿರಿಗೆ ವಯಸ್ಸಿಗೆ ಬಂದ ಮಗಳನ್ನು ಹೇಗೆ ಮುದ್ದಿನಿಂದ ಬೆಳೆಸಬೇಕೆಂಬುದೇ ಗೊತ್ತಿರುವುದಿಲ್ಲ. ಅವರ ಪ್ರಕಾರ ಮುದ್ದು ಎಂದರೆ ಮಗಳಿಗೆ ಏನು ಕೊರತೆ ಬರದ ಹಾಗೆ ನೋಡಿಕೊಳ್ಳುವುದು… ಎಲ್ಲರ ಹಾಗೇ ನನ್ನ ಮಗಳು ಬದುಕಲಿ ಎಂಬ ಆಸೆಯಿಂದ ಒಂದು ಮೊಬೈಲ್ ಕೊಡಿಸಿ ಬಿಡುತ್ತಾರೆ. ಆಮೇಲೆ ಮಗಳಿಗೆ ಕರೆನ್ಸಿ ಹೇಗೆ ಬರುತ್ತದೆ ಎಂಬ ಪುಟ್ಟ ಯೋಚನೆ ಕೂಡ ಮಾಡಲಾರದ ಮುಗ್ದರು. ಅಪ್ಪನ ಹತ್ತಿರ ನೂರು ರೂ ಪಾಕೆಟ್ ಮನಿ ಪಡೆದುಕೊಂಡು ನೈಲ್ಪಾಲಿಶ್, ಲಿಪ್ಸ್ಟಿಕ್, ಒಂದು ಜೊತೆ ಚಪ್ಪಲಿ, ಒಂದು ಚೂಡಿದಾರ್, ತರುವ ಹುಡುಗಿಯ ಬಗ್ಗೆ ಹೆಮ್ಮೆಪಡುತ್ತಾರೆಯೇ ವಿನಃ, ನೂರು ರೂಪಾಯಿಗೆ ಇಷ್ಟೆಲ್ಲಾ ತರಲು ಹೇಗೆ ಸಾಧ್ಯ ಎಂದು ಯೋಚಿಸುವುದಿಲ್ಲ. ಹಿಂದೆಲ್ಲ ಯಾರಾದರು ಪ್ರೀತಿಸುತ್ತಿದ್ದಾರೆ ಎಂದು ಸಣ್ಣದೊಂದು ಅನುಮಾನ ಮೂಡಿದರು ಸಾಕು, ರಂಪಾಟವೇ ನಡೆದು ಹೋಗಿ ಬಿಡುತ್ತಿತ್ತು. ಈಗ ಪ್ರೀತಿ- ಪ್ರೇಮ ಎಂಬುದರಲ್ಲಿ ಸ್ವತ: ಹುಡುಗ ಹುಡುಗಿಯರಿಗೆ ಆಸಕ್ತಿ ಇಲ್ಲ ! ನಿಂಗೆ ಲವ್ವರ್ ಇದಾನಾ ಅಂದ್ರೆ ? ಬಾಯ್ ಫ್ರೆಂಡ್ಸ್ ಇದಾರೆ ಎಂಬ ಉತ್ತರ ಬರುತ್ತದೆ. ಒಬ್ಬ ಹುಡುಗನಿಗೆ ಅಂಟಿಕೊಂಡು ಬದುಕುವುದು ಹುಡುಗಿಗೆ ಇಷ್ಟವಿಲ್ಲ. ಪ್ರೇಮ ಎಂಬುದು ಸಾಕಾಗಿ ಹೋಗುತ್ತದೆ. ಹೊಸದೊಂದು ಗೆಳತನಕ್ಕೆ ಹುಡುಗ ಹುಡುಗಿ ಇಬ್ಬರು ತಯಾರಾಗುತ್ತಾರೆ. ಹೀಗೆ ಪದೇ ಪದೇ ಗೆಳೆಯನನ್ನು ಬದಲಿಸಿಕೊಳ್ಳುವ ಹುಡುಗಿಯೇ ತಾಯಂದಿರ ಸೆರಗಿನ ಕೆಂಡವಾಗಿ ಮನೆಯನ್ನೇ ಭಸ್ಮಗೊಳಿಸುವುದು. ಈ ಬಗ್ಗೆ ಕೆಲವು ಹುಡುಗಿಯರಿಗೆ ಸಣ್ಣ ಅಂಜಿಕೆಯೂ ಇರುವುದಿಲ್ಲ, ಅಸಲಿಗೆ ನಮ್ಮ ಸಮಾಜ ಅವರನ್ನ ಒಪ್ಪಿಕೊಳ್ಳುತ್ತದೆ! ತಂದೆ-ತಾಯಿಗಳು ಸಹ ಸಮರ್ಥಿಸಿಕೊಳ್ಳುತ್ತಾರೆ!! ಇದು ಖಂಡಿತ ಆರೋಗ್ಯಕರ ಬೆಳವಣಿಗೆ ಅಲ್ಲ, ಹುಡುಗನೇ ಆಗಲಿ, ಹುಡುಗಿಯೇ ಆಗಲಿ, ಸಮಾಜದ ಆರೋಗ್ಯ ಹಾಳುಮಾಡಬಾರದು. ಕ್ಷಮಿಸಿ, ಪ್ರಾಮಾಣಿಕವಾಗಿ ಪ್ರೀತಿಸುವ ಪ್ರೇಮಿಗಳಿಗೆ ನನ್ನ ಮಾತುಗಳು ಅನ್ವಯಿಸುವುದಿಲ್ಲ. ಹೊಟ್ಟೆಪಾಡಿಗೆ ಅನಿವಾರ್ಯವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡವರ ಬಗ್ಗೆ ನಾವು ಅಸಹ್ಯದಿಂದ ನೋಡುತ್ತೇವೆ. ಶೋಕಿಗಾಗಿ, ಕೇವಲ ಎಂಜಾಯ್ ಮಾಡುವುದಕ್ಕಾಗಿಯೇ ನಿನ್ ಜೊತೆ ಕಳೀತೀನಿ ಅನ್ನೋರ ಬಗ್ಗೆ ನಾವು ತೆಪ್ಪಗಿರುತ್ತೇವೆ. ಗೆಳತಿಯರೇ, ಯೌವ್ವನ ಎಂಬುದು ಒಂದು ದಿನ ಮುಗಿದು ಹೋಗುತ್ತದೆ. ಉಂಡ ಎಲೆಯನ್ನು ಯಾರು ಎತ್ತಿಟ್ಟುಕೊಳ್ಳುವುದಿಲ್ಲ, ತಿಪ್ಪೆಗೆಸೆಯುತ್ತಾರೆ. ನಿಮ್ಮ ಜೀವನ ಕೂಡ ಹಾಗೆ… ನೋವಾಗಿದ್ರೆ ಐಯಾಮ್ ಸಾರಿ.
