
ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಂಗಮೇಶ್ವರಪೇಟೆ ಬಳಿ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಈ ಬಸ್ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡಲು ಹೋಗಿದಾಗ ಮಳೆಯ ಕಾರಣ ಟೈರ್ ಸ್ಕಿಡ್ ಆಗಿ ಬಸ್ ರಸ್ತೆ ಬದಿಗೆ ಸರಿದಿದ್ದು, ಬಳಿಕ ಚಾಲಕನ ನಿಯಂತ್ರಣಕ್ಕೆ ಸಿಗದೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮವಾಗಿ ಕಂಬವು ಮುರಿದು ಬಸ್ ಮೇಲೆಯೇ ಬಿದ್ದಿದೆ. ಅದೃಷ್ಟವಶಾತ್ ಬಸ್ ಕಂಬಕ್ಕೆ ಡಿಕ್ಕಿಯಾದ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಮಾಹಿತಿ ತಿಳಿದ ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.




