
ಚಾಮರಾಜನಗರ: ಭಾರತ ರತ್ನ ಡಾ.ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಕರ್ನಾಟಕ ರತ್ನ ಡಾ. ರಾಜಕುಮಾರ್ ತಮ್ಮ ಸಾಧನೆಯ ಮೂಲಕವೇ ಜಗತ್ತಿಗೆ ಪ್ರಸಿದ್ಧರಾದ ಮಹಾ ಸಾಧಕರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ರಾಜಕುಮಾರ ಅವರ ಪುಣ್ಯಸ್ಮರಣೆ ಅಂಗವಾಗಿ ಮಾತನಾಡುತ್ತ ಕಡುಬಡತನದಲ್ಲೂ ವಿಶ್ವ ಸಾಧನೆಯನ್ನು ದಿವಾನರಾಗಿ ಇಡೀ ಜಗತ್ತಿಗೆ ಮಾದರಿಯಾದ ಮೈಸೂರನ್ನು ನಿರ್ಮಾಣ ಮಾಡುವ ಮೂಲಕ ಭಾರತದ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ನೀಡಿರುವ ಸರ್ ಎಂ ವಿಶ್ವೇಶ್ವರಯ್ಯನವರ ಭಾರತದ ಸುಪುತ್ರರಾಗಿ ಕೃಷಿ ವಿಜ್ಞಾನ,ನೀರಾವರಿ,ತಂತ್ರಜ್ಞಾನ, ಶಿಕ್ಷಣ,ಕೈಗಾರಿಕೆ,ಗುಡಿ ಕೈಗಾರಿಕೆ ಸರ್ವತೋಮುಖ ಅಭಿವೃದ್ಧಿಯ ಮೂಲಕ ಮೈಸೂರು ಪ್ರಾಂತ್ಯವನ್ನು ವಿಶ್ವಕ್ಕೆ ಮಾದರಿಯಾಗಿ ರೂಪಿಸಿದ ಕನ್ನಡಿಗರು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ಮೂಲಕ ನೆಲ,ಜಲ, ಭಾಷೆ ಸಂಸ್ಕೃತಿ ಪರಂಪರೆ ಉಳಿಸುವ ಕಾರ್ಯ ಮಾಡಿದ ಸರ್ ಎಂ ವಿಶ್ವೇಶ್ವರಯ್ಯನವರು ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ ಎಂದರು.
ಡಾ. ರಾಜಕುಮಾರ್ ಅವರ ಕುರಿತು ಮಾತನಾಡಿದ ಕನ್ನಡದ ಹಿರಿಯ ಚಳುವಳಿಗಾರರು ಮುಖಂಡರಾದ ಶಾ ಮುರಳಿ ಮಾತನಾಡಿ ರಾಜಕುಮಾರ್ ಕನ್ನಡ ನೆಲ ಜಲ ಭಾಷೆಯ ಸಾರ್ವಭೌಮರು. ರಾಜಕುಮಾರ್ ಅವರಿಗೆ ರಾಜಕುಮಾರ್ ಅವರೇ ಸಾಟಿ. ಚಲನಚಿತ್ರದ ಮೂಲಕ ಇಡೀ ಜನರ ಬದುಕನ್ನು ಪರಿವರ್ತಿಸಿದ ಮಹಾ ನಟರು. ರಾಜಕುಮಾರ್ ಅವರ ಅಪಹರಣದ ಸಂದರ್ಭದಲ್ಲಿ ಕನ್ನಡ ಕನ್ನಡ ಚಳುವಳಿಗಾರರು ನಡೆಸಿದ ಹೋರಾಟ ಮತ್ತು ತಾಳವಾಡಿ ಯ ಘಟನೆಗಳ ಬಗ್ಗೆ ವಿವರಿಸಿದರು. ರಾಜಕುಮಾರ ಅವರ ಅಪಹರಣ ಕನ್ನಡಿಗರಿಗೆ ನೋವು ತಂದ ಘಟನೆ. ರಾಜಕುಮಾರರು ಕನ್ನಡಿಗರ ಮನದಲ್ಲಿ ಅವಿಸ್ಮರಣೀಯವಾಗಿ ಇರುತ್ತಾರೆ ಎಂದರು.
ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ , ಡಾ. ರಾಜಕುಮಾರ್ ಅವರು ಕಲೆ ನಟನೆಯ ಮೂಲಕ ಸಿನಿಮಾ ಪ್ರಪಂಚದ ಅದ್ವಿತೀಯ ನಾಯಕರಾಗಿ ಬೆಳೆದವರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಗದೀಶನ್, ಬಿಕೆ ಆರಾಧ್ಯ, ರವಿಚಂದ್ರ ಪ್ರಸಾದ್, ಸರಸ್ವತಿ,ಕಾಂತರಾಜು ಮಹದೇವ ಶೆಟ್ಟಿ ಉಪಸ್ಥಿತರಿದ್ದರು.




