ನೀನು ಡೆಂಜರಸ್ ಫೆಲೋ ಅಂತೆ, ನೀನು ಸರಿ ಇಲ್ವಂತೆ, ನಿನ್ನ ಸಹವಾಸ ಮಾಡಬಾರದಂತೆ, ನೀನು ಡೆಡ್ಲಿ, ನೀನು ರೌಡಿ,… ಇಂತಹ ಮಾತುಗಳು, ನಂಗೆ ಪರಿಚಯ ಆದವರು ಕೊಂಚ ಆತ್ಮೀಯರಾದಾಗ ಹೇಳುವ ಮಾತುಗಳು. ಬಹುಶಃ ರೂಮರ್ ಎಂಬ ಸುಳಿಗೆ ಪ್ರತಿಯೊಬ್ಬರು ಸಿಕ್ಕಿರುತ್ತಾರೆ ಆದರೆ, ನನ್ನ ಬಗ್ಗೆ ಇರುವಷ್ಟು ರೂಮರ್ಗಳು ಮತ್ತೊಬ್ಬರ ಬಗ್ಗೆ ಇರಲಿಕ್ಕಿಲ್ಲ. ಕೆಲವು ಸಂಗತಿಗಳು ನಂಗೇ ಭಯ ಹುಟ್ಟಿಸುವಂತಿರುತ್ತದೆ. ಇತ್ತೀಚೆಗೆ ಇದೆನ್ನೆಲ್ಲ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇನೆ. ಇಲ್ಲಿ ನಾವು ಮಾಡಬಹುದ್ದಾದ್ದು ಕೇರ್ಲೇಸ್ ಮಾತ್ರ. ಹೆಚ್ಚಿನ ಸಲ ರೂಮರ್ಗಳಿಗೆ ಪ್ರತಿಕ್ರಿಯಿಸಲು ಹೋದಾಗ ಸಣ್ಣ ಗಾಯವೊಂದನ್ನು ಕೆರೆದುಕೊಂಡು ದೊಡ್ಡದು ಮಾಡಿ ಕೊಂಡಂತಾಗುತ್ತದೆ. ಇಷ್ಟಕ್ಕೂ ರೂಮರ್ಗಳು ಹುಟ್ಟಿದ್ದಾದರು ಎಲ್ಲಿಂದ..? ಅಂತ ಹುಡುಕುತ್ತಾ ಹೋದರೆ ಅದಕ್ಕಿಂತ ದಡ್ಡತನ ಮತ್ತೊಂದಿಲ್ಲ. ರೂಮರ್ ಎಂಬುದು ವೇಶ್ಯೆಯೊಬ್ಬಳಿಗೆ ಹುಟ್ಟಿದ ಮಗುವಿನಂತೆ! ಅದು ಯಾರಿಂದ ಅಂತ ಹೇಳುವುದು ಕಷ್ಟ. ಹಾಗೆ ಹುಟ್ಟಿದ ರೂಮರ್ನ್ನು ನೀರೆರೆದು ಪೋಷಿಸುವುದು ಮಾತ್ರ ನಮ್ಮ ಜೊತೆಗಿರುವವರೇ ಆಗಿರುತ್ತಾರೆ. ಅವರು ನಮ್ಮ ಶತ್ರುಗಳಲ್ಲ, ಮಿತ್ರರಂತಿರುವ ಹಿತ ಶತ್ರುಗಳು! ಇಂತಹ ಮಾತುಗಳನ್ನು ಕೇರ್ಲೆಸ್ ಮಾಡುತ್ತಾ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಲೇಬೇಕು. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ನಾವು ತುಂಬಾ ಇಷ್ಟಪಡುವ, ಆತ್ಮೀಯರು ಎಂದುಕೊಂಡ ಗೆಳೆಯನೋ, ಗೆಳತಿಯೋ ಇಂತಹ ರೂಮರ್ಗಳನ್ನು ನಂಬಿ ನಮ್ಮನ್ನು ಅನುಮಾನಿಸಿ, ನಮ್ಮಿಂದ ದೂರಾಗುತ್ತಾರಲ್ಲ ಅದು ನಿಜಕ್ಕೂ ಯಾತನಾಮಯ ಸನ್ನಿವೇಶ. ಇಲ್ಲಿ ರೂಮರ್ನಿಂದಾಗಿರೋ ನೋವಿಗಿಂತ ಜನ್ಮದ ಮೈತ್ರಿ ಎಂಬಂತಿದ್ದ ಗೆಳಯ/ಗೆಳತಿ ನಮ್ಮನ್ನು ತಪ್ಪಾಗಿ ಅರ್ಥಮಾಡಿಕೊಂಡರೆಂಬ ನೋವು ಹೆಚ್ಚು ಕಾಡುತ್ತದೆ. ದುಷ್ಟರಿಂದ ದೂರವಿರು ಎಂಬ ನೀತಿಯನ್ನು ನೀವು ಪಾಲಿಸುತ್ತೀರಿ ನಿಜ. ಆದರೆ ಇದಕ್ಕೂ ಮುನ್ನ ಅವರ ಜೊತೆಗಿದ್ದ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ, ಯಾವ ಹಂತದಲ್ಲಾದರು ಆತನ ದುಷ್ಟತನ ನಿಮಗೆ ಗೋಚರಿಸಿತ್ತೇ? ಇಲ್ಲ ಎನ್ನುವುದಾದರೆ ಯಾರೋ ಹುಟ್ಟಿಸಿದ ರೂಮರ್ಗೆ ನೀವೇಕೆ ಹಾಲುಣಿಸುತ್ತೀರಿ? ಇದರಿಂದ ನಿಮ್ಮ ಗೆಳೆಯನ ಪರಿಸ್ಥಿತಿ ಏನಾಗಬಹುದು? ನೆನಪಿಡಿ. ಕೊಂಚ ದುರ್ಬಲ ಮನಸ್ಸಿನವರಿಗೆ ಈ ರೂಮರ್ ಪಿಡುಗು ನೆಮ್ಮದಿಯನ್ನೆ ನಾಶ ಮಾಡುತ್ತದೆ. ಕೆಲವರು ಇದರಿಂದ ಆತ್ಮಹತ್ಯೆ ಮಾಡಿಕೊಂಡ ನಿದರ್ಶನವು ಇದೆ. ಹುಡುಗರ ವಿಷಯದಲ್ಲಿ ರೂಮರ್ಗಳು ಹೆಚ್ಚು ಹಾನಿ ಮಾಡುವುದಿಲ್ಲ ಆದರೆ, ಹುಡುಗಿಯೊಬ್ಬಳ ಬದುಕಿನಲ್ಲಿ ಯಾರೋ ಹಬ್ಬಿಸುವ ರೂಮರ್ಗಳು ಆಕೆಯ ಭವಿಷ್ಯವನ್ನೇ ಹಾಳುಮಾಡಬಲ್ಲದು. ನೋವಿನಲ್ಲಿದ್ದವರಿಗೆ ಸಂತೈಸುವುದೇ ನಿಜವಾದ ಗೆಳೆತನ, ಅಂತಹ ಪರಿಸ್ಥಿತಿಯಲ್ಲಿ ದೂರಾಗುವ ನಿರ್ಧಾರ ಮಾಡುವುದು ತರವೇ? ಒಂದ್ಸಲ ಯೋಚ್ನೆ ಮಾಡಿ. ಇನ್ನು ರೂಮರ್ಗಳನ್ನು ನೀವು ಕೂಡ ಹರಿಸಿದ್ದೀರಾ? ಹೀಗಂತೆ, ಹಾಗಂತೆ ಅನ್ನೋ ಮಾತನ್ನ ಯಾರೋ ಹೇಳಿದ್ದನ್ನು ಹಾಗೆ ನೀವು ಇನ್ನೊಬ್ಬರಿಗೆ ಹರಿ ಬಿಡುತ್ತೀರಾ.. ಪ್ಲೀಸ್.. ಸ್ಟಾಪ್ ದಿಸ್ ನಾನ್ಸೆನ್ಸ್. ಯಾವುದೇ ವಿಚಾರವನ್ನು ಅದರ ಬಗ್ಗೆ, ವ್ಯಕ್ತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ನೀವು ಮಾತಾಡಬೇಡಿ. ಫನ್ನಿ ಅನ್ಸೋದೆ ಅದು. ನನ್ನ ಪರಿಚಯವೇ ಇಲ್ಲದ, ನನ್ನನ್ನು ಇದುವರೆಗು ನೋಡಿರದ ವ್ಯಕ್ತಿಯೊಬ್ಬರು ನನ್ನ ಸ್ನೇಹಿತರಿಗೆ ನನ್ನ ಬಗ್ಗೆ ಸರ್ಟಿಫಿಕೇಟ್ ಕೊಡ್ತಾರೆ! ಬಿಡಿ ಯಾರದೋ ತೆವಲಿಗೆ ಹುಟ್ಟಿಕೊಂಡ ರೂಮರ್ಗಳು ನಿಮ್ಮ ಸ್ನೇಹವನ್ನು, ಭಾಂದವ್ಯವನ್ನು, ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ನಡುವೆ ಇರುವ ತುಂಬಾ ಪ್ರಾಮಾಣಿಕವಾದ ನಂಬಿಕೆಯನ್ನು ಘಾಸಿಗೊಳಿಸಬಾರದು ಅನ್ನೋದಷ್ಟೆ ನನ್ನ ಉದ್ದೇಶ. ಈ ಹೊತ್ತಿಗಾಗಲೆ ಮತ್ತಾರದೋ ಹೊಟ್ಟೆಯೊಳಗೆ ಹೊಸ ರೂಮರ್ರೊಂದು ಗರ್ಭ ಧರಿಸಿದ್ದರೆ ಆಶ್ಚರ್ಯವೇನಿಲ್ಲ. ಭರವಸೆಯೊಂದೇ ಬದುಕನ್ನು ಕೊನೆತನಕ ಕೈ ಹಿಡಿದು ನಡೆಸುತ್ತದೆ ಅಲ್ವಾ?
