
ಬೆಂಗಳೂರು: ಬೆಂಗಳೂರಿನಲ್ಲಿ ಸದಾ ಚಲನಶೀಲವಾಗಿರುವ ಕಲಾಸಿಪಾಳ್ಯದಲ್ಲಿ ಇತ್ತೀಚೆಗೆ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದ ಘಟನೆ ಮರೆಯುವ ಮುನ್ನ, ಇದೀಗ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ. ಹೆಬ್ಬಾಳ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ವಾಸವಿದ್ದ ಶಮಾ ಪರ್ವಿನ್ ಎಂಬ 30 ವರ್ಷದ ಮಹಿಳೆಯು ಅಲ್ಖೈದಾ ಹಾಗೂ ಜಮಾತ್ ಇಸ್ಲಾಂ ಮುಂತಾದ ಉಗ್ರ ಸಂಘಟನೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆಂಬಲ ನೀಡುತ್ತಿದ್ದ ಆರೋಪದ ಮೇಲೆ ಗುಜರಾತ್ನ ಎಟಿಎಸ್ ಸಿಬ್ಬಂದಿಯಿಂದ ಬಂಧನಕ್ಕೊಳಗಾಗಿದ್ದಾಳೆ. ಜಾರ್ಖಂಡ್ ಮೂಲದ ಈಕೆಯು ಮನೆಯಲ್ಲೇ ಕುಳಿತು ಪಾಕಿಸ್ತಾನದ ಇರ್ಸಾರ್ ಅಹ್ಮದ್ನ ಜಿಹಾದಿ ಪ್ರಚೋದನಾತ್ಮಕ ಭಾಷಣಗಳನ್ನು ಶೇರ್ ಮಾಡುತ್ತಿದ್ದಳು ಮತ್ತು ಮೂರು ವರ್ಷಗಳಿಂದ ಜಿಹಾದಿ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿ, ಇತರರಿಗೂ ಜಿಹಾದಿ ಸಂದೇಶಗಳನ್ನು ಹರಡುತ್ತಿದ್ದಳು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಬಂಧಿತ ಅಲ್ಖೈದಾ ಸದಸ್ಯರ ವಿಚಾರಣೆಯಲ್ಲಿ ಶಮಾ ಪರ್ವಿನ್ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ, ಎಟಿಎಸ್ ಅಧಿಕಾರಿಗಳು ಬಂದು ನಗರದ 8ನೇ ಎಸಿಎಂಎಂ ಕೋರ್ಟ್ನಿಂದ ಟ್ರಾಂಸಿಟ್ ವಾರಂಟ್ ಪಡೆದು ಆಕೆಯನ್ನು ಗುಜರಾತ್ಗೆ ಕರೆದೊಯ್ದಿದ್ದಾರೆ. ಶಮಾದ ಈ ಕೃತ್ಯದಿಂದ ಆಕೆಯ ತಾಯಿ ಮತ್ತು ಸಹೋದರ ಕೂಡ ಬೆಚ್ಚಿಬಿದ್ದಿದ್ದು, ಅಧಿಕಾರಿಗಳು ಈಗಾಗಲೇ ಆಕೆಯ ಲ್ಯಾಪ್ಟಾಪ್ ವಶಕ್ಕೆ ಪಡೆದು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.