ನವದೆಹಲಿ: ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತೀಗಳಾದ ಸೂರ್ಯಕಾಂತ್ ಅವರು ಇಂದು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದು, ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರಮಾಣ ವಚನದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ಹಾಗೂ ಇತರ ಗಣ್ಯಯರು ಹಾಜರಿದ್ದರು. ಹಾಲಿ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್. ಗವಾಯಿ ಅವರು ನವೆಂಬರ್ 23ರಂದು ನಿವೃತ್ತಿಯಾದ ನಂತರ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಿದ್ದಾರೆ. ಅವರು ಸುಮಾರು 15 ತಿಂಗಳ ಕಾಲ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದುಪಡಿಸುವುದು, ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ಪೆಗಾಸಸ್ ಸ್ಪೈವೇರ್ ಸೇರಿದಂತೆ ಹಲವಾರು ಪ್ರಮುಖ ವಿಚಾರಗಳಲ್ಲಿ ಅವರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಮೂಲತಃ ಹರ್ಯಾಣದ ಹಿಸಾರ್ ಜಿಲ್ಲೆಯವರಾದ ಸೂರ್ಯಕಾಂತ್ ಅವರು ಒಂದು ಸಣ್ಣ ಪಟ್ಟಣದಿಂದ ಬೆಳೆದು ಬಂದು ದೇಶದ ಉನ್ನತ ನ್ಯಾಯಾಂಗ ಹುದ್ದೆಯವರೆಗೆ ತಲುಪಿದ್ದಾರೆ.
