ಶೃಂಗೇರಿ: ಗೌರಿಶಂಕರ ಸಭಾಂಗಣದಲ್ಲಿ ಜಯಭಾರತಿ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಸತೀಶ್ ಜನರಲ್ ಮ್ಯಾನೇಜರ್ ಶೃಂಗೇರಿ ಶಾರದಾ ಪೀಠಮ್ ಹಾಗೂ ಚಾರಿಟೆಬಲ್ ಟ್ರಸ್ಟ್ನ ರಂಗನಾಥ್ ಅವರು ನೆರವೇರಿಸಿದರು. ಅಧ್ಯಕ್ಷರಾದ ಗಜಾನನ ಎಂ. ಭಟ್ ಅವರು ‘ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನೋವು, ನಲಿವಿನ ಜೊತೆಗೆ ಉನ್ನತ ಫಲಿತಾಂಶ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದರು. ಪುಟಾಣಿ ವಿದ್ಯಾರ್ಥಿಗಳ ಸುಂದರ ನೃತ್ಯದ ಜೊತೆಗೆ ವಿಭಿನ್ನ ರೀತಿಯ ಸಾಹಸ, ರೂಪಕ ನೃತ್ಯ, ತೆಯ್ಯಂ ನೃತ್ಯ ಹಾಗೂ ಅನೇಕ ಶೈಲಿಯ ನೃತ್ಯದ ಮೂಲಕ ಜನರ ಮನಸ್ಸನ್ನು ಸೆಳೆದರು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವರಲಕ್ಷ್ಮಿ, ಕರ್ನಾಟಕ ಬ್ಯಾಂಕ್ ಹಿರಿಯ ಶಾಖಾ ವ್ಯವಸ್ಥಾಪಕರಾದ ಕಿರಣ ಬಿ.ಎನ್ ಹಾಗೂ ಡಾ.ಚಾರುಲತಾ ಕೆ.ಎಸ್ ಮತ್ತಿತರು ಉಪಸ್ಥಿತರಿದ್ದರು.
