
ವಿಜಯನಗರ: ಜಿಲ್ಲೆ ಕೂಡ್ಲಿಗಿ ಪಟ್ಟಣದ ಒಂದನೇ ವಾರ್ಡ್ನ ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೀದಿನಾಯಿ ದಾಳಿ ಪ್ರಕರಣ ಭಾರೀ ಆತಂಕ ಮೂಡಿಸಿದ್ದು, ಮೂರು ವರ್ಷದ ಬಾಲಕಿ ಸೇರಿದಂತೆ ಐದಾರು ಜನರ ಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದೇ ನಾಯಿಯು ವಿನಾಕಾರಣವಾಗಿ ಜನರ ಮೇಲೆ ದಾಳಿ ನಡೆಸಿದ ಪರಿಣಾಮ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಿದೆ. ಕೆಎಸ್ಆರ್ಟಿಸಿ ಡಿಪೋ ಹಿಂಭಾಗದಲ್ಲಿ ವಾಸಿಸುವ ಶ್ರೀನಿವಾಸ್ ಅವರ ಮೊಮ್ಮಗಳು ಶ್ರೀನಿಧಿ (3) ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ನಾಯಿ ಬಾಲಕಿಯ ಕತ್ತಿಗೆ ಕಚ್ಚಿ ಎಳೆದಾಡಿದ್ದು, ನಂತರ ಸೊಂಟ ಭಾಗಕ್ಕೂ ಕಚ್ಚಿ ತೀವ್ರ ಗಾಯಗೊಳಿಸಿದೆ. ಬಾಲಕಿ ಕಿರುಚಾಡಿದ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಸ್ಥಳೀಯರು ಓಡಿ ಬಂದು ನಾಯಿಯಿಂದ ರಕ್ಷಿಸಿ ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿ ಚುಚ್ಚುಮದ್ದು ನೀಡಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ ಕಳುಹಿಸಿದ್ದಾರೆ. ಇದೇ ನಾಯಿಯು ಇದೇ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಹಾಸ್ಟೆಲ್ ವಿದ್ಯಾರ್ಥಿ ಸೇರಿದಂತೆ ಇನ್ನೂ ನಾಲ್ವರಿಗೆ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈವರೆಗೆ ಯಾರ ಮೇಲೂ ದಾಳಿ ಮಾಡದಿದ್ದ ನಾಯಿ ಇಂದು ಏಕಾಏಕಿ ಆಕ್ರಮಣಕಾರಿ ವರ್ತನೆ ತೋರಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದೇ ದಿನದಲ್ಲಿ ಐದು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಒಂದನೇ ವಾರ್ಡ್ ಮಾತ್ರವಲ್ಲದೆ ಪಟ್ಟಣದಾದ್ಯಂತ ನಾಗರೀಕರು ಬೆಚ್ಚಿಬಿದ್ದಿದ್ದು, ಭೀತಿ ವ್ಯಾಪಿಸಿದೆ. ಕೂಡಲೇ ದಾಳಿ ಮಾಡಿದ ನಾಯಿಯನ್ನು ಸೆರೆಹಿಡಿದು ಅದರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡಿ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಅವುಗಳನ್ನು ನಿಯಂತ್ರಿಸಲು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ಹಿರಿಯ ಮುಖಂಡ ಹಾಗೂ ಪತ್ರಕರ್ತ ವಿ.ಜಿ. ವೃಷಭೇಂದ್ರ ಸೇರಿದಂತೆ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.




