
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳೆ ರಾಜ್ಯದ 2026–27ನೇ ಸಾಲಿನ ಬಜೆಟ್ ಅನ್ನು ಮಂಡಿಸಲಿದ್ದು, ಇದು ಅವರ 17ನೇ ಬಜೆಟ್ ಆಗಿದೆ. ಈ ಬಾರಿ ಬೆಂಗಳೂರಿನ ಘನ ತ್ಯಾಜ್ಯ ನಿರ್ವಹಣೆಗೆ ವಿಶೇಷ ಗಮನ ಸಿಗುವ ನಿರೀಕ್ಷೆ ಇದೆ. ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಸರ್ಕಾರದಿಂದ ಒಟ್ಟು 2,794 ಕೋಟಿ ರೂಪಾಯಿ ಅನುದಾನವನ್ನು ಕೋರಿದೆ. ನಗರದಲ್ಲಿ ಪ್ರತಿದಿನ ಸುಮಾರು 6 ಸಾವಿರ ಟನ್ಗಳಷ್ಟು ಕಸ ಉತ್ಪತ್ತಿಯಾಗುತ್ತಿರುವ ಹಿನ್ನೆಲೆ ಕಸ ಸಂಗ್ರಹಣೆ, ಸಾಗಣೆ, ವಿಂಗಡಣೆ, ಸಂಸ್ಕರಣೆ ಹಾಗೂ ಕಸದ ಗುಡ್ಡಗಳ ನಿರ್ವಹಣೆಗೆ ಹೆಚ್ಚಿನ ಹಣ ಅಗತ್ಯವಿದೆ ಎಂದು ಸಂಸ್ಥೆ ತಿಳಿಸಿದೆ. ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯಡಿ ಕಾರ್ಯನಿರ್ವಹಿಸುತ್ತಿದ್ದ ಈ ಘಟಕವು 2024ರಲ್ಲಿ ಪ್ರತ್ಯೇಕ ಸಂಸ್ಥೆಯಾಗಿ ರಚನೆಯಾಗಿ ಈಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ವಾಹನಗಳ ಖರೀದಿ, ಕಸ ಸಂಸ್ಕರಣಾ ಘಟಕಗಳ ನಿರ್ಮಾಣ, ಕಸದ ಗುಡ್ಡಗಳ ಸುಧಾರಣೆ, ಮನೆಮನೆಗೆ ಕಸ ಸಂಗ್ರಹಣೆಗಾಗಿ ಹೆಚ್ಚುವರಿ ಸಿಬ್ಬಂದಿ ಹಾಗೂ ಆಧುನಿಕ ವ್ಯವಸ್ಥೆಗಳಿಗೆ ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಪ್ರಸ್ತಾವಿಸಲಾಗಿದೆ. ಇದರಂತೆ ಕೇಂದ್ರ ನಗರ ಪಾಲಿಕೆಗೆ 480.37 ಕೋಟಿ, ಪೂರ್ವ ನಗರ ಪಾಲಿಕೆಗೆ 496.07 ಕೋಟಿ, ಉತ್ತರ ನಗರ ಪಾಲಿಕೆಗೆ 558.80 ಕೋಟಿ, ದಕ್ಷಿಣ ನಗರ ಪಾಲಿಕೆಗೆ 546.18 ಕೋಟಿ ಮತ್ತು ಪಶ್ಚಿಮ ನಗರ ಪಾಲಿಕೆಗೆ 715.91 ಕೋಟಿ ರೂಪಾಯಿ ಹಂಚಿಕೆ ಮಾಡುವಂತೆ ಒಟ್ಟು 2,794 ಕೋಟಿ ರೂಪಾಯಿ ಬೇಡಿಕೆ ಇಡಲಾಗಿದೆ. ಹಿಂದಿನ ವರ್ಷಗಳಲ್ಲಿ 2024ರಲ್ಲಿ 1,085 ಕೋಟಿ ಮತ್ತು 2025ರಲ್ಲಿ 1,500 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ನಗರದಲ್ಲಿ ಕಸದ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕಸದ ಮರುಬಳಕೆ ಘಟಕಗಳು, ಶಕ್ತಿ ಉತ್ಪಾದನೆ ಘಟಕಗಳು ಹಾಗೂ ಪರಿಸರ ಸ್ನೇಹಿ ವಿಧಾನಗಳಿಗೆ ಹೆಚ್ಚಿನ ಹಣ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ. ಆದ್ದರಿಂದ ಈ ಬಾರಿ ಬಜೆಟ್ನಲ್ಲಿ ಎಷ್ಟು ಅನುದಾನ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.




