
ಉದ್ಯೋಗ: ದೇಶ ಸೇವೆಗೆ ಆಸಕ್ತ ಯುವಕರಿಗೆ ಸುವರ್ಣಾವಕಾಶ ಲಭಿಸಿದ್ದು, ಗೃಹ ಸಚಿವಾಲಯದ ಅಧೀನದಲ್ಲಿರುವ ಸಶಸ್ತ್ರ ಸೀಮಾ ಬಲ (SSB)ವು ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ವಿಭಾಗದಲ್ಲಿ ಒಟ್ಟು 76 ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿ 30 ಹೆಡ್ ಕಾನ್ಸ್ಟೇಬಲ್ (ಲ್ಯಾಬ್ ಅಸಿಸ್ಟೆಂಟ್), 12 ಹೆಡ್ ಕಾನ್ಸ್ಟೇಬಲ್ (ಫಿಸಿಯೋಥೆರಪಿ ಅಸಿಸ್ಟೆಂಟ್) ಮತ್ತು 34 ಕಾನ್ಸ್ಟೇಬಲ್ (ನರ್ಸ್ ಅಸಿಸ್ಟೆಂಟ್ ಕಮ್ ಮೆಡಿಕ್) ಹುದ್ದೆಗಳು ಸೇರಿದ್ದು, ಪಿಯುಸಿ (ಸೈನ್ಸ್) ಜೊತೆಗೆ ಸಂಬಂಧಿತ ಡಿಪ್ಲೊಮಾ/ಅನುಭವ ಹೊಂದಿರುವ 18 ರಿಂದ 27 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾನ್ಸ್ಟೇಬಲ್ ಹುದ್ದೆಗಳಿಗೆ 10ನೇ ತರಗತಿ, ಫಸ್ಟ್ ಏಡ್ ಪ್ರಮಾಣಪತ್ರ ಮತ್ತು ಅನುಭವ ಅಗತ್ಯವಿದ್ದು, ಮಾರ್ಚ್ 21ರಿಂದ 30 ದಿನಗಳೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕವಿದ್ದು, ಎಸ್ಸಿ, ಎಸ್ಟಿ, ಮಹಿಳೆಯರು ಮತ್ತು ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ಇದೆ. ಆಯ್ಕೆ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ ಪರಿಶೀಲನೆ, ಪಿಇಟಿ, ಪಿಎಸ್ಟಿ ಹಾಗೂ ಲಿಖಿತ ಪರೀಕ್ಷೆ ಸೇರಿದ್ದು, ಆಯ್ಕೆಯಾದವರಿಗೆ ₹21,700 ರಿಂದ ₹81,100ರವರೆಗೆ ವೇತನದ ಜೊತೆಗೆ ಕೇಂದ್ರ ಸರ್ಕಾರದ ಭತ್ಯೆಗಳು ಲಭ್ಯವಾಗಲಿವೆ.







