
ಶೃಂಗೇರಿ: ಮಲೆನಾಡ ಸಾಂಸ್ಕೃತಿಕ ಅಸ್ಮಿತೆ ಯಾದ ಪ್ರಸಿದ್ಧ ಮತ್ತು ಬಹು ಕ್ಷೇತ್ರಗಳ ನಿರಂತರ ಸಾಧಕ , ಶೃಂಗೇರಿಯ ರಮೇಶ್ ಬೇಗಾರ್ ಇವರು ಇತ್ತೀಚಿಗೆ ಹೊನ್ನಾವರದ ಗುಣವಂತೆಯಲ್ಲಿ ನಡೆದ ಕೆರೆಮನೆ ಶಂಭು ಹೆಗ್ಡೆ ರಾಷ್ಟ್ರೀಯ ನಾಟ್ಯ ಉತ್ಸವದಲ್ಲಿ, ಸಾಂಸ್ಕೃತಿಕ ಸಂಘಟನ ಕ್ಷೇತ್ರದಿಂದ ಸಾಧಕ ಸನ್ಮಾನದ ಗೌರವಕ್ಕೆ ಪಾತ್ರರಾಗಿದ್ದಾರೆ.
9 ದಿನಗಳ ಕಾಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರ ವಿವಿಧ ಕಲಾ ಪ್ರದರ್ಶನದ ಈ ಪ್ರತಿಷ್ಟಿತ ವೇದಿಕೆಯಲ್ಲಿ ಪ್ರತೀ ದಿನವೂ ಕಲಾ ಕ್ಷೇತ್ರದಲ್ಲಿ ದುಡಿದ ಮಹನೀಯರನ್ನು ಗೌರವ ಸನ್ಮಾನದ ಮೂಲಕ ಕೆರೆಮನೆ ಶಂಭು ಹೆಗ್ಡೆ ಸ್ಮಾರಕವಾಗಿ ಗೌರವಿಸಲಾಗಿತ್ತು.
ರಂಗಭೂಮಿ, ಯಕ್ಷಗಾನ, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರ ದಲ್ಲಿ ಕಳೆದ 38 ವರ್ಷಗಳಿಂದ ಅನನ್ಯವಾಗಿ ತೊಡಗಿಕೊಂಡಿರುವ ರಮೇಶ್ ಬೇಗಾರ್ ತಾನು ಕೈಯಾಡಿಸಿದ ಎಲ್ಲಾ ಪ್ರಕಾರಗಳಲ್ಲೂ ಮೈಲಿಗಲ್ಲು ನೆಟ್ಟ ಪ್ರತಿಭಾಶಾಲಿ ಆಗಿದ್ದಾರೆ ಮಾತ್ರವಲ್ಲದೆ ಆ ಎಲ್ಲಾ ಕ್ಷೇತ್ರದ ಸಾಧನೆಗಾಗಿ ರಾಜ್ಯ ಮತ್ತು ವಿದೇಶ ದಲ್ಲೂ ವಿವಿಧ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ವರ್ಷ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿರುವ ಬೇಗಾರ್ ಯಕ್ಷಗಾನ ಅಕಾಡೆಮಿ ಗೆ 2 ಅವಧಿಯಲ್ಲಿ ಸದಸ್ಯರಾದ ಕೀರ್ತಿ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿರುವ ರಮೇಶ್ ಬೇಗಾರ್ “ಯಕ್ಷಗಾನದ ಮೇರು ಸಾಧಕರಾದ ಮತ್ತು ಆ ಕಲೆಗೆ ಅಕಾಡೆಮಿಕ್ ಸ್ಪರ್ಶ ನೀಡಿದ ಪ್ರಯೋಗ ಶೀಲ ದಿಗ್ಗಜ ಶಂಭು ಹೆಗ್ಡೆ ಅವರ ಕರ್ಮ ಕ್ಷೇತ್ರ ದಲ್ಲೇ ಅವರ ಸ್ಮರಣೆಯ ಪ್ರಶಸ್ತಿ ಸ್ವೀಕರಿಸಿರುವುದು ಅಪಾರ ಹೆಮ್ಮೆ ತಂದಿದೆ ” ಎಂದಿದ್ದಾರೆ.