
(Sringeri) ಶೃಂಗೇರಿ :ಧರ್ಮೋ ರಕ್ಷತಿ ರಕ್ಷಿತಃ, ಜಗದ್ಗುರು ಶಂಕರ ಭಗವತ್ಪಾದರ ದಿವ್ಯ ಸಂಕಲ್ಪದಂತೆ ಶೃಂಗೇರಿ ಶಾರದಾ ಪೀಠವು ಕಳೆದ ಹಲವು ಶತಮಾನಗಳಿಂದ ಧರ್ಮ ಸಂರಕ್ಷಣೆಯ ಕಾರ್ಯವನ್ನು ಅವಿಚ್ಛಿನ್ನವಾಗಿ ನೆರವೇರಿಸಿಕೊಂಡು ಬರುತ್ತಿದೆ. ಈ ಭವ್ಯ ಪರಂಪರೆಯಲ್ಲಿ ಬಂದ ಜಗದ್ಗುರುಗಳೆಲ್ಲರೂ ಲೋಕ ಕಲ್ಯಾಣಾರ್ಥವಾಗಿ ಮಾಡಿರುವ ಕಾರ್ಯಗಳೆಲ್ಲವೂ ವರ್ಣನಾತೀತವಾಗಿದೆ. ಧಾರ್ಮಿಕ ಮಾತ್ರವಲ್ಲದೆ ಶೈಕ್ಷಣಿಕ, ಆರೋಗ್ಯ ಮುಂತಾದ ಸಾಮಾಜಿಕ ಕ್ಷೇತ್ರಗಳಿಗೆ ಸಲ್ಲಿಸಿದ ಕೊಡುಗೆ ಅನುಪಮವಾದದ್ದು. ಅಂತೆಯೇ ಪ್ರಸ್ತುತ ನಮ್ಮ ನೆರೆಯ ರಾಜ್ಯ, ಶಂಕರಾಚಾರ್ಯರು ಅವತರಿಸಿದ ಪುಣ್ಯಭೂಮಿ ಕೇರಳದಲ್ಲಿ ಮತಾಂತರದ ಪಿಡುಗು ವ್ಯಾಪಕವಾಗಿ ಹರಡುತ್ತಿದೆ. ತಿರುವನಂತಪುರದ ‘ಆಚಾರ್ಯ ಮನೋಜ್ ಜಿ’ಯವರ ‘ಆರ್ಷ ವಿದ್ಯಾ ಸಮಾಜವು’ ಮತಾಂತರಗೊಂಡ ಎಂಟು ಸಾವಿರಕ್ಕೂ ಅಧಿಕ ಹಿಂದೂ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿರುತ್ತಾರೆ. ಇದನ್ನು ಗುರುತಿಸಿ ‘ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು 50 ಲಕ್ಷ ರೂಪಾಯಿ’ಗಳನ್ನು ನೀಡಿ ಧರ್ಮಸಂರಕ್ಷಣಾ ಕಾರ್ಯಕ್ಕೆ ಪರಮಾನುಗ್ರಹ ಮಾಡಿ ಆರ್ಶೀವದಿಸಿದರು.