
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಫಿನಾಡಿನಲ್ಲಿ ಕಾಡಾನೆ ದಾಳಿ ಮುಂದುವರಿದು ಒಂದು ವಾರದ ಅಂತರದಲ್ಲಿ ಮತ್ತೊಂದು ಬಲಿ ಪಡೆದಿದ್ದು ಮಲೆನಾಡು ಬೆಚ್ಚಿಬಿದ್ದಿದೆ. ಕಳೆದ ಸೋಮವಾರ ಓರ್ವ ಕಾರ್ಮಿಕನನ್ನು ಬಲಿ ಪಡೆದಿದ್ದ ಅದೇ ಸಲಗ ಮತ್ತೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಕೂಲಿ ಕಾರ್ಮಿಕ ಮಹಿಳೆ ಬೋರಮ್ಮ (33) ಅವರನ್ನು ಬಲಿ ಪಡೆದಿದೆ. ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದರೂ ಕಾಡಾನೆಗೆ ಮದವೇರಿದೆ ಎಂದು ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ಅಧಿಕಾರಿಗಳು ಮೃತದೇಹವನ್ನು ಟಾರ್ಪಲ್ನಲ್ಲಿ ಸುತ್ತಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಎನ್.ಆರ್.ಪುರ ತಾಲೂಕಿನ ಕಡಬಗೆರೆಯಲ್ಲಿ ಸ್ಥಳೀಯರು ವಾಹನವನ್ನು ಅಡ್ಡಗಟ್ಟಿ ರಾಜ್ಯ ಹೆದ್ದಾರಿಯ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿ, ಅರಣ್ಯ ಸಚಿವರು ಬರುವವರೆಗೂ ಮೃತದೇಹ ತೆರವು ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನರಿಗೆ ವಿಷಯ ಗೊತ್ತಾಗಬಾರದು ಎಂಬ ಉದ್ದೇಶದಿಂದ ಶವ ಸಾಗಿಸಲಾಗುತ್ತಿತ್ತು ಎಂದು ಆರೋಪಿಸಿದ ಮಲೆನಾಡಿಗರು ನಿರಂತರ ಕಾಡಾನೆ ದಾಳಿಗೆ ತಾಳ್ಮೆ ಕಳೆದುಕೊಂಡು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಕಿಡಿಕಾರಿದರು. ಮಹಿಳೆ ಬಲಿ ಪಡೆದ ಅರ್ಧ ಗಂಟೆಯಲ್ಲೇ ಅಧಿಕಾರಿಗಳು ಮತ್ತು ವೈದ್ಯರ ತಂಡ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ಹೊಡೆದು ಮಲಗಿಸಿ ಚಿಕ್ಕಮಗಳೂರು ತಾಲೂಕಿನ ಬೆರಣಗೋಡು ಸಮೀಪದ ಕೆರೆಮನೆ ಬಳಿ ಸಲಗವನ್ನು ಸೆರೆ ಸೆರೆಹಿಡಿಯಲಾಗಿದೆ. ಕಾಡಾನೆ ದಾಳಿಗೆ ಇದುವರೆಗೆ 9 ಜನ ಬಲಿಯಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಸ್ಥಳಕ್ಕೆ ಶೃಂಗೇರಿ ಶಾಸಕ ರಾಜೇಗೌಡ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಈ ಘಟನೆಗೆ ಸಂಬಂಧಿಸಿ ಇಂದು ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಬಂದ್ಗೆ ಕರೆ ನೀಡಲಾಗಿದ್ದು, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲೂಕುಗಳು ಹಾಗೂ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ವ್ಯಾಪ್ತಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ರೈತ ಸಂಘಟನೆಗಳು, ನಾಗರಿಕ ಹಿತ ರಕ್ಷಣಾ ವೇದಿಕೆ, ರೈತ ಒಕ್ಕೂಟ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಮೇಲಿಂದ ಮೇಲೆ ಸಾವುಗಳು ಸಂಭವಿಸುತ್ತಿದ್ದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ, ಸತ್ತ ಬಳಿಕ ಪರಿಹಾರ ನೀಡುವುದು ಸಮಸ್ಯೆಗೆ ಪರಿಹಾರವಲ್ಲ, 20 ಲಕ್ಷ ಹಣ ಒಂದು ಜೀವ ತರಲ್ಲ, ಕಾಡಾನೆ ಕಾಟಕ್ಕೆ ಶಾಶ್ವತ ಬ್ರೇಕ್ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿ, ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.




