
ಶೃಂಗೇರಿ: ಸಮೀಪದ ವಿದ್ಯಾರಣ್ಯಪುರದ ಶ್ರೀ ರಾಮ ದೇವಸ್ಥಾನದಲ್ಲಿ ಇಂದು ದಶಮಿ ಅಂಗವಾಗಿ ಬೆಳಿಗ್ಗೆ 11 ಗಂಟೆಯಿಂದ ಶ್ರೀ ರಾಮ ಪಟ್ಟಾಭಿಷೇಕ, ಶ್ರೀ ರಾಮ ತಾರಕ ಹೋಮ, ಮಹಾ ಮಂಗಳಾರತಿ, ಅಷ್ಟಾವಧಾನ ಸೇವೆ ಹಾಗೂ ಸಂತರ್ಪಣೆ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆ 5.30ರಿಂದ ಶ್ರೀ ಸೀತಾ ಕಲ್ಯಾಣ ಮಹೋತ್ಸವ ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮಗಳಿಗೆ ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಇರಲಿದ್ದು, ರಾತ್ರಿ 8.30ಕ್ಕೆ ವಾದ್ಯಮೇಳಗಳು ಮತ್ತು ಭಜನೆಗಳೊಂದಿಗೆ ಶ್ರೀ ರಾಮದೇವರ ಬೀದಿ ಉತ್ಸವ ಜರುಗಿ, ಮಹಾ ಮಂಗಳಾರತಿ ಹಾಗೂ ಸಂತರ್ಪಣೆಯೊಂದಿಗೆ ಕಾರ್ಯಕ್ರಮಗಳು ಸಮಾಪ್ತಿಗೊಳ್ಳಲಿವೆ. ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಕೈಜೋಡಿಸಬೇಕು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.







