
ಶೃಂಗೇರಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ನಾಲ್ಕನೇ ರಾಜ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸ್ವತ್ವಯುತ ಸಾಹಿತಿಗಳ ಸಂಪರ್ಕ ಅಭಿಯಾನದಂತೆ ಶೃಂಗೇರಿಯ ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ಸಾಹಿತಿ ಜಿ.ವಿ.ಗಣೇಶಯ್ಯ ಮತ್ತು ಗಣಿತವನ ಶಿವಶಂಕರರವರನ್ನು ಅವರ ಮನೆಗಳಲ್ಲೇ ಬೇಟಿಯಾಗಿ ಸನ್ಮಾನಿಸಿ ಜೂನ್ 7 ಮತ್ತು 8 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಗಣೇಶಯ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಚಟುವಟಿಕೆಯ ಕುರಿತು ಮೆಚ್ಚಿ ಮಾತನಾಡಿ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು. ಒಟ್ಟು 22 ಕೃತಿ ರಚಿಸಿರುವ ಗಣೇಶಯ್ಯ ತಮ್ಮ ಸ್ಕ್ರೀನ್ ಪ್ರಿಂಟಿಂಗ್ ಕೃತಿಗಾಗಿ ರಾಜ್ಯ ವಿಜ್ಞಾನ ಪರಿಷತ್ತಿನಿಂದ ಪುರಸ್ಕೃತರು.ಪ್ರಜಾವಾಣಿ ಮಕ್ಕಳ ಕವಿತೆ ಸ್ಪರ್ಧೆಯಲ್ಲಿ ಮತ್ತು ಸುಧಾ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದು ವ್ಯಂಗ್ಯಚಿತ್ರಕಾರರಾಗೂ ಪ್ರಸಿದ್ದರು.
ಗಣಿತವನ ಶಿವಶಂಕರ್ ಭಾಷಾ ಬೇದ ಇಲ್ಲದೇ ಎಲ್ಲಾ ಭಾರತೀಯ ಭಾಷೆಗಳನ್ನು ಸಮಬಾವದಿಂದ ಕಂಡು ಕಾರ್ಯಕ್ರಮ ರೂಪಿಸುತ್ತಿರುವ ಪರಿಷತ್ತಿನ ಕಾರ್ಯ ಪ್ರಶಂಸಿಸಿದರು. ದಾವಣಗೆರೆ ಸಮಾವೇಶ ಏಕಾತ್ಮತೆ ಮೂಡಿಸಲಿ ಎಂದು ಹಾರೈಸಿದರು. ಶಿವಶಂಕರ್ ಹತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕ ಸಿರಿ ಪ್ರಶಸ್ತಿ ಪುರಸ್ಕೃತರು. ಗಣಿತ ಶಿಕ್ಷಕರಾಗಿರುವ ಇವರು ಗಣಿತ ಕಲಿಕೆ ಸುಲಭವಾಗುವಂತೆ ಹಲವು ಕೃತಿ ರಚಿಸಿದ್ದಾರೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ಥಿಗೂ ಭಾಜನರಾಗಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಭಾಕರ ಕಾರಂತ್,ಕಾರ್ಯದರ್ಶಿ ರೇಣುಕಾ ಸುರೇಶ್,ಸಹ ಕಾರ್ಯದರ್ಶಿ ಸುಧಾ ನಾಗರಾಜ್,ಕೇಶವ್ ಪಾಟ್ಕರ್,ನಾಗಭೂಷಣ್ ಮುಂತಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.