
ಶೃಂಗೇರಿ: ಗದ್ದೆಯಲ್ಲಿ ಕೆಲಸ ಮಾಡುವಾಗ ಹಂದಿ ದಾಳಿ ಮಾಡಿದ ಘಟನೆ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಮಾಗಲು ಎಂಬಲ್ಲಿ ನಡೆದಿದೆ. ಮಾಗಲುವಿನ ನಿವಾಸಿ ಜಯರಾಮ್ ಎಂಬುವವರು ಗದ್ದೆಯಲ್ಲಿ ಇಂದು ಬೆಳಿಗ್ಗೆ ಕೆಲಸ ಮಾಡುವಾಗ ಹಂದಿ ದಾಳಿ ಮಾಡಿದೆ. ಈ ಘಟನೆಯಲ್ಲಿ ಜಯರಾಮ್ ಕೈ ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತ್ತಿದೆ. ಕಾಡಾನೆ ಕಾಡುಕೋಣಗಳು ಗದ್ದೆ ತೋಟಗಳನ್ನು ಹಾಳು ಮಾಡುತ್ತಿರುವುದು ಅಷ್ಟೇ ಅಲ್ಲದೇ ಅದೆಷ್ಟೋ ಜನರ ಜೀವವನ್ನೂ ಬಲಿ ತೆಗೆದುಕೊಂಡಿವೆ. ಮಲೆನಾಡಿನಲ್ಲಿ ಇಂಥಹ ಪ್ರಕರಣ ಆಗುತ್ತಿರುವುದು ನಿನ್ನೆ ಮೊನ್ನೆಯಲ್ಲ, ಆದಷ್ಟೂ ಬೇಗ ಈ ಸಂಬಂಧ ಇಂಥಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.