
ಸೊರಬ: ಸೊರಬ ತಾಲ್ಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಗುರುವಾರ ರಾತ್ರಿ ವಿನೋದಾ(42) ಎಂಬ ಮಹಿಳೆಯು ಮನೆಯ ಹಿಂದಿನ ಕೋಣೆಯಲ್ಲಿ ತಂತಿಯ ಮೇಲೆ ಒಣಗಿಸಿದ ಬಟ್ಟೆಯನ್ನು ತೆಗೆಯಲು ಹೋದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಿದ್ಯುತ್ ಸ್ಪರ್ಶಿಸಿದೆ. ಆ ಸಮಯದಲ್ಲಿ ಪತ್ನಿಯನ್ನು ರಕ್ಷಿಸಲು ಹೋದ ಪತಿ ಕೃಷ್ಣಪ್ಪ(54)ರಿಗೂ ವಿದ್ಯುತ್ ತಗುಲಿದ್ದು. ದಂಪತಿಗಳಿಬ್ಬರೂ ಸಾವಿಗೀಡಾಗಿದ್ದಾರೆ. ಇದನ್ನು ನೋಡಿ ರಕ್ಷಿಸಲು ಮುಂದಾದ ಪಕ್ಕದ ಮನೆಯ ಮಂಜುನಾಥ ಅವರಿಗೂ ವಿದ್ಯುತ್ ಶಾಖ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಮೃತ ದಂಪತಿಗಳು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಸೊರಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.