
ಬಹುಶಃ ನಿಮಗೂ ಇಂಥದ್ದೊಂದು ಅನುಭವ ಆಗಿರುತ್ತದೆ. ಬೆಳಿಗ್ಗೆ ಏಳುತ್ತಲೇ ಮನಸು ಖಾಲಿ ಖಾಲಿ. ಯಾವುದರಲ್ಲೂ ಉತ್ಸಾಹ ಇರುವುದಿಲ್ಲ. ಅದಿಕ್ಕೆ ಸರಿಯಾಗಿ ಟಿ.ವಿ ಜ್ಯೋತಿಷಿ ನಿಮ್ಮ ರಾಶಿಯ ಕುರಿತು ಅಪಶಕುನದ ಮಾತಾಡಿರುತ್ತಾನೆ. ಅದನ್ನೆಲ್ಲ ನೀವು ನಂಬದೇ ಇದ್ದರೂ ಮನಸಿಗೆ ಏನೋ ಒಂದು ರೀತಿ ಕಿರಿಕಿರಿ ಅನಿಸತೊಡಗುತ್ತದೆ. ಹಾಗೆ ಶುರುವಾದ ಕಿರಿಕಿರಿ ಮಧ್ಯಾಹ್ನದ ಹೊತ್ತಿಗೆ ಸಿಡಿಮಿಡಿಯಾಗಿ ಪರಿವರ್ತನೆಯಾಗ ತೊಡಗುತ್ತದೆ. ಯಾರಾದ್ರು ಮಾತಾಡಿದ್ರೆ ಅವರಿಗೆ ಹಿಡ್ಕೊಂಡು ಚಚ್ಚಿಬಿಡಬೇಕು ಅನಿಸುತ್ತೆ. ನಮ್ಮ ಮನಸ್ಸಿನ ಈ ಮಂಗಾಟಕ್ಕೆ ಯಾವ ಕಾರಣವು ಇರುವುದಿಲ್ಲ ಎಂದೋ ಕೈಕೊಟ್ಟು ಹೋದ ಹುಡುಗಿಯ ನೆನಪಾಗಿರುತ್ತದೆ, ಕಳೆದ ವರ್ಷ ಮಾಡಿದ ಬಿಜಿನೆಸ್ ಲಾಸ್ ಆಗಿದ್ದನ್ನು ನೆನಪಿಸಿಕೊಳ್ಳತೊಡಗುತ್ತೇವೆ. ಅಷ್ಟೇ ಸಾಕು ಇಡೀ ದಿನ ಮೂಡೌಟ್ ಆಗಿ ಬಿಡುತ್ತೆ. ಹುಡುಗರಿಗೆ ಕುಡಿತದ ಅಭ್ಯಾಸ ಇರೋರಾದ್ರೆ ಇದೊಂದು ನೆಪ ಸಾಕು. ಬಾರ್ಗೆ ಸೆಟ್ಲ್ ಆಗಿಬಿಡಲು! ನೀವು ಗಮನಿಸಿದ್ದಿರೋ ಇಲ್ವೋ ಗೊತ್ತಿಲ್ಲ. ಲೋ ಬಾರೋ ಬೈಟು ಕಾಫಿ ಕುಡಿಯಣ ಅಂದ್ರೆ ಕೆಲವು ಸಲ ಯಾರೂ ಸಿಗುವುದಿಲ್ಲ. ಆದ್ರೆ ಎಣ್ಣೆ ಹೊಡಿಬೇಕು ಅಂತ ಅಂದುಕೊಳ್ಳಿ ತಕ್ಷಣ ಯಾರಾದ್ರು ಪ್ರತ್ಯಕ್ಷವಾಗಿಬಿಡ್ತಾರೆ! ಕೆಲವು ಸಲ ಸ್ಪಾನ್ಸ್ರ್ಸ್ಗಳೇ ಸಿಕ್ಕಿ ಬಿಡುತ್ತಾರೆ! ಅದಿರಲಿ ಮೂಡೌಟ್ ವಿಷಯಕ್ಕೆ ಬರೋಣ ತೀರಾ ಒಂಟಿಯಾಗಿ ಬಿಟ್ಟೆ ಅನಿಸೋಕೆ ಶುರುವಾಗುತ್ತದೆ. ಇದೇ ನೋಡಿ ತುಂಬಾ ಅಪಾಯಕಾರಿ ಹಂತ. ಇಲ್ಲೋ ನಾವು ಜಾಗರೂಕತೆಯಿಂದ ವರ್ತಿಸಬೇಕಾದ್ದು. ಕೆಲವರು ಆತ್ಮಹತ್ಯೆ ಮಾಡಿಕೊಳ್ಳೋದು, ಮನೆಬಿಟ್ಟು ತೆರಳುವುದು ಎಲ್ಲವೂ ಇದೇ ಸನ್ನಿವೇಶದಲ್ಲಿ ಜರಗುತ್ತದೆ. ಅದು ಒಂದು ರೀತಿಯದ್ದಾದರೆ ಕೆಲವು ಸಲ ನಮ್ಮ ವ್ಯಕ್ತಿತ್ವ, ಮುಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ನಾವು ತುಂಬಾ ಕೇರ್ಫುಲ್ ಆಗಿ ವರ್ತಿಸಬೇಕು. ಕೆಲವು ಸಲ ನಂಗೆ ಇಂಥಹ ಭಾವ ಮೂಡಿ ಬಿಡುತ್ತದೆ. ನನ್ನ ಎರಡು ಮೊಬೈಲ್ಗಳಲ್ಲಿ ಒಟ್ಟು ಸಾವಿರಾರು ನಂಬರ್ಗಳಿವೆ. ಯಾರಾದ್ರು ಮಾತಿಗೆ ಸಿಗುತ್ತಾರಾ ಅಂದುಕೊಳ್ಳುತ್ತೇನೆ. ಆದರೆ ಮಾತು ಬೇಡವೆನಿಸುತ್ತದೆ. ಆಫೀಸ್ನಲ್ಲಿ ಇರಿಸಿಕೊಂಡ ಪುಸ್ತಕಗಳತ್ತ ಒಮ್ಮೆ ಕಣ್ಣಾಡಿಸುತ್ತೇನೆ. ಆದರೆ ಯಾವುದೇ ಪುಸ್ತಕ ತಂದರೂ ಅದನ್ನು ಓದಿ ಮುಗಿಸಿಯೇ ಮುಂದಿನ ಕೆಲಸ ಆರಂಭಿಸುವುದು ನನ್ನ ಅಭ್ಯಾಸವಾದ್ದರಿಂದ ಮತ್ತೊಮ್ಮೆ ಓದಲು ಆ ಕ್ಷಣದಲ್ಲಿ ಮನಸ್ಸಾಗದು. ನಮ್ಮ ವರದಿಗಾರ ರವಿ, ಆದರ್ಶ ಯಾರಾದರು ಸಿಕ್ಕರೆ ಅವರೊಂದಿಗೆ ಆಗುಂಬೆಗೆ ಹೋಗುತ್ತೇನೆ. ಅಲ್ಲಿ ಚೆಕ್ಪೋಸ್ಟ್ ಬಳಿ ಒಂದು ಅಂಗಡಿಗಾಡಿ ಇದೆಯಲ್ಲ ಅದು ಪಡಿಯಾರ್ ಅಂತ. ಸುಮ್ನೆ ಅವರೊಂದಿಗೆ ಮಾತಾಡಿದರೂ ಸಾಕು ಒಂದು ಪುಸ್ತಕ ಓದಿದಷ್ಟೆ ತಿಳುವಳಿಕೆ ಸಿಗುತ್ತದೆ. ಬೈರಪ್ಪ, ಯಂಡಮೂರಿ, ಅನಂತ್ಕುಮಾರ್, ಲಂಕೇಶ್ರಂತಹ ಸಾಹಿತಿಗಳಿಂದ ಹಿಡಿದು ಮೋದಿ, ಮೊಯ್ಲಿ, ಅಡ್ವಾನಿ ಇಂದಿರಾರಂತಹ ರಾಜಕಾರಣಿಗಳ ಬಗ್ಗೆ ಸಾಕಷ್ಟು ತಿಳಿದಿದ್ದಾರೆ. ಇತಿಹಾಸ, ಅರ್ಥಶಾಸ್ತ್ರ ಹೀಗೆ ಯಾವುದೇ ವಿಚಾರದಲ್ಲೂ ಅವರು ಮಾತಾಡಬಲ್ಲರು. ಹಾಗಾಗಿ ಅವರೊಂದಿಗಿನ ಮಾತು ಮನಸ್ಸಿನ ಬೇಸರ ಓಡಿಸಿ ಚಿಂತನೆಗೆ ಹಚ್ಚುತ್ತದೆ. ನಾವು ಹುಡುಗರು, ವಿಚಾರ ಹಾಗಿರಲಿ. ಈ ಹೆಣ್ಣು ಮಕ್ಕಳಿಗೆ ಇಂಥಹ ಒಂಟಿತನ ತುಂಬಾ ಇಕ್ಕಟ್ಟಿಗೆ ಸಿಲಿಕಿಸುತ್ತದೆ. ಒಂಟಿತನದ ಬೇಸರ ಹೋಗಲಾಡಿಸಲು ತುಂಬಾ ಜನ ಮೊಬೈಲ್ ಮೊರೆ ಹೋಗುತ್ತಾರೆ. ಯಾರಿಗೋ ಮೆಸೇಜ್, ಕಾಲ್ ಮಾಡಿ ತಮ್ಮ ನೋವನ್ನು ಶೇರ್ ಮಾಡಿಕೊಳ್ಳುತ್ತಾರೆ. ತಪ್ಪಾಗೋದೆ ಅಲ್ಲಿ. ಬೇಸರಕ್ಕೆ, ನೋವಿಗೆ, ಒಂಟಿತನಕ್ಕೆ ಯಾರಾದರೊಬ್ಬರ ಆಸರೆ ಬೇಕು. ಹಾಗಂತ ನೀವು ಸಿಕ್ಕಸಿಕ್ಕರೆದುರು ನಿಮ್ಮ ತೀರಾ ಪರ್ಸನಲ್ ವಿಚಾರವನ್ನು ಹೇಳಿಕೊಳ್ಳುವುದು ಸಾಧ್ಯವಿಲ್ಲ. ಆದರೆ ದುರಂತವೆಂದರೆ ನಾವೇ ಆಯ್ಕೆ ಮಾಡಿಕೊಂಡ ಗೆಳೆಯನೇ ನಮ್ಮನ್ನು ಯಾಮಾರಿಸುವ ಸಾಧ್ಯತೆಗಳಿವೆ. ಹಾಗಂತ ಅವನು ನಿಮ್ಮ ವಿಚಾರವನ್ನ ಕಂಡಕಂಡವರಿಗೆ ಹೇಳಿಲ್ಲ. ಆದರೆ ಆ ವ್ಯಕ್ತಿಯಿಂದ ನೀವು ನಿರೀಕ್ಷಿಸಿದ ಸಮಾಧಾನ ಸಾಂತ್ವಾನ ಸಿಗುವುದಿಲ್ಲ. ಆಗ ನೀವು ಛೇ ಮೋಸ ಹೋದೆ ಅಂದುಕೊಂಡು ಕೊರಗುತ್ತೀರಿ. ಇದು ಎಷ್ಟು ಸರಿ ಹೇಳಿ. ನಿಮ್ಮ ಭಾವನೆಗೆ ಸ್ಪಂದಿಸದಿರುವುದು ನಿಮಗೆ ನೋವನ್ನುಂಟು ಮಾಡಿರಬಹುದು. ಆದರೆ ಇದರಲ್ಲಿ ಆತನ ತಪ್ಪಿರುವುದಿಲ್ಲ. ನಮ್ಮ ನೋವಿಗೆ, ಸಿಟ್ಟಿಗೆ, ಬೇಸರಕ್ಕೆ ಇನ್ನಾರನೋ ದೂಷಿಸುವುದು ಸರಿಯಿಲ್ಲ. ನಿಮ್ಮ ಸಂತೋಷ ನಿಮ್ಮಲ್ಲಿಯೇ ಇರುತ್ತದೆ. ಆದರೆ ಅದನ್ನು ಕಂಡುಕೊಳ್ಳುವ ತಾಳ್ಮೆ ನಿಮಗಿರಬೇಕು. ಇಷ್ಟರ ಮೇಲೂ ಯಾರದ್ದಾದರು ಸ್ನೇಹ ಬೇಕೆನಿಸಿದರೆ ಪುಸ್ತಕಗಳೊಂದಿಗೆ ಗೆಳೆತನ ಆರಂಭಿಸಿ ಏನು ಬದಲಾವಣೆ ಆಯ್ತು ಅಂತ ನಂಗೆ ಹೇಳಿ.





