
ಚಿತ್ರದುರ್ಗ: ಚಿತ್ರದುರ್ಗದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು, ತನ್ನ ಪೋಷಕರು ತನ್ನ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸುತ್ತಿರುವುದನ್ನು ತಪ್ಪಿಸಲು ಧೈರ್ಯವಾಗಿ ಸ್ವತಃ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಶಾಲೆಯಲ್ಲಿದ್ದಾಗ ಪೊಲೀಸರು ಬಾಲ್ಯ ವಿವಾಹದ ಹಾನಿ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳ ಕುರಿತು ನೀಡಿದ್ದ ಜಾಗೃತಿ ಭಾಷಣದಿಂದ ಪ್ರೇರಿತಳಾದ ಆಕೆ, ನೇರವಾಗಿ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟ ಅವರಿಗೆ ವಿಷಯ ತಿಳಿಸಿದಳು. ಪೊಲೀಸರು ತಕ್ಷಣ ಕ್ರಮ ಕೈಗೊಂಡು, ತಂದೆ, ತಾಯಿ ಹಾಗೂ ಅಣ್ಣನನ್ನು ವಿಚಾರಣೆಗಾಗಿ ಕರೆಯಿಸಿ, ಮೊದಲಿಗೆ ನಿರಾಕರಿಸಿದರೂ ನಂತರ ಮದುವೆ ಸಿದ್ಧತೆ ನಡೆಸುತ್ತಿದ್ದೇವೆಂದು ಒಪ್ಪಿಕೊಂಡರು. ಬಳಿಕ ಸಿಡಿಪಿಒ ಹಾಗೂ ಅಧಿಕಾರಿಗಳೊಂದಿಗೆ ಬಾಲಕಿಯನ್ನು ಚಿತ್ರದುರ್ಗದ ಮಕ್ಕಳ ಕಲ್ಯಾಣ ಕೇಂದ್ರದ ಬಾಲ ಮಂದಿರಕ್ಕೆ ಕಳುಹಿಸಲಾಯಿತು. ಈ ಧೈರ್ಯಶಾಲಿ ನಡೆ ಗ್ರಾಮೀಣ ಪ್ರದೇಶದಲ್ಲೂ ಜಾಗೃತಿ ಮೂಡಿಸುತ್ತಿದ್ದು, ಅನ್ಯರಿಗೂ ಮಾದರಿಯಾಗಿದೆ ಎಂದು ಡಿವೈಎಸ್ಪಿ ಡಿ. ರಾಜಣ್ಣ ಪ್ರಶಂಸಿಸಿದರು.