
ರಾಜ್ಯದ ಅತಿ ಉದ್ದದ ತೂಗು ಸೇತುವೆಯಾದ ಸಿಗಂದೂರ ಸೇತುವೆಯ ಕಾಮಗಾರಿ ಅಂತಿಮ ಹಂತ ತಲುಪಿದ್ದು. ಜೂನ್14 ರಂದು ಉದ್ಘಾಟಿಸಲು ನಿರ್ಧರಿಸಲಾಗಿತ್ತು. ಆದರೆ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನ ಸೇರಿಲು ಕಷ್ಟಸಾಧ್ಯವಾದ್ದರಿಂದ ಕಾರ್ಯಕ್ರಮ ಮುಂದಕ್ಕೆ ಹೋಗುವುದು ಬಹುತೇಕ ಖಚಿತವಾಗಿದೆ. ಸೇತುವೆಗಳ ಉದ್ಘಾಟನೆಯಾಗಿ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಮುನ್ನವೆ ಸಾಮಾಜಿಕ ಜಾಲತಾಣಗಳಲ್ಲಿ ಸೇತುವೆಯ ನಾಮಕರಣ ಚರ್ಚೆಗಳು ಪ್ರಾರಂಭವಾಗಿವೆ. ಯಾವುದೇ ಹೆಸರಿಡಬೇಕೆಂದರೂ ಇದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹೋಗಬೇಕು. ಅಲ್ಲಿಂದ ಅಧಿಕೃತ ಆದೇಶ ಹೊರಡಿಸುವವರೆಗೆ ಇಂತಹ ಚರ್ಚೆಗಳು ನಿರಂತರವಾಗಿರುತ್ತಿವೆ.
ಸಿಗಂದೂರು ಸೇತುವೆಗೆ ವಿವಿಧ ಹೆಸರುಗಳನ್ನು ಸೂಚಿಸಿ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಸಾಳುವ ವಂಶದ ರಾಣಿ ಚನ್ನಭೈರಾದೇವಿ, ಸಿಗಂದೂರು ಶ್ರೀ ಚೌಡೇಶ್ವರಿ, ಸಿಗಂದೂರು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ರಾಮಪ್ಪ, ಮಾಜಿ ಸಿಎಂ ಯಡಿಯೂರಪ್ಪ ಹೆಸರುಗಳು ಮುಂಚೂಣಿಯಲ್ಲಿದೆ. ಕಾಳುಮೆಣಸಿನ ರಾಣಿ ಎಂದು ಕರೆಯಲ್ಪಡುವ ರಾಣಿ ಚನ್ನಭೈರಾದೇವಿಯು ಪಶ್ಚಿಮಘಟ್ಟಗಳ ಶರಾವತಿ ನದಿ ಉದ್ದಕ್ಕೂ ಸಮ್ರಾಜ್ಯವನ್ನು ಕಟ್ಟಿ ಕಾಳುಮೆಣಸಿನ ಮಹತ್ವವನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಈಕೆಯ ಇತಿಹಾಸ, ಆಳ್ವಿಕೆ, ಸಾಹಸಗಳ ಬಗ್ಗೆ ತುಂಬಾ ಜನರಿಗೆ ಪರಿಚಯವೇ ಇಲ್ಲ. ಸೇತುವೆಗೆ ಹೆಸರು ಇಡುವ ಮೂಲಕ ಆಕೆಯನ್ನು ಶಾಶ್ವತವಾಗಿಸಬೇಕು ಎನ್ನುವುದು ತುಂಬಾ ಜನರ ಅಭಿಪ್ರಾಯ.
ಧರ್ಮಾಧಿಕಾರಿಯಾದ ರಾಮಪ್ಪರವರು ಸಣ್ಣಗುಡಿಯಾಗಿದ್ದ ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ರೂಪಿಸಿದ ಕೀರ್ತಿ ಇವರದ್ದಾಗಿದೆ. ಸಾಗರದಂತೆ ಹರಿದುಬರುವ ಭಕ್ತರು ಹಾಗೂ ಪ್ರವಾಸಿಗರು ಸೇತುವೆ ನಿರ್ಮಾಣಕ್ಕೆ ಪ್ರಚೋದನೆ ಆಯಿತು. ಹಾಗಾಗಿ ಕ್ಷೇತ್ರದ ಬೆಳವಣಿಗೆಗೆ ಕಾರಣೀಭೂತರಾದ ಧರ್ಮಾಧಿಕಾರಿ ರಾಮಪ್ಪ ಅವರ ಹೆಸರು ಇಡಬೇಕೆಂಬ ಬಗ್ಗೆಯೂ ಚರ್ಚೆ ಮುಂಚೂಣಿಯಲ್ಲಿದೆ.
ಬಂಗಾರಪ್ಪ, ಎಸ್.ಎಂ ಕೃಷ್ಣ, ಬಿ.ಎಸ್ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಸೇತುವೆ ನಿರ್ಮಾಣದ ಪ್ರಸ್ತಾಪ ಬಂದರೂ ಬಹುದೊಡ್ಡ ವೆಚ್ಚದ ಕಾರಣ ಸರ್ಕಾರಕ್ಕೆ ಆಸಕ್ತಿ ತೋರಿಸಿರಲಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರು ಜಿಲ್ಲಾ ಮುಖ್ಯ ರಸ್ತೆ ಪಟ್ಟಿಯಲ್ಲೂ ಇಲ್ಲದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿ ಕೇಂದ್ರದ ಮೂಲಕ ಅನುದಾನ ತಂದು ಸೇತುವೆ ನಿರ್ಮಿಸುವಲ್ಲಿ ಯಶಸ್ವಿಯಾದರು. ಹಾಗೆಯೆ ಸೇತುವೆ ನಿರ್ಮಾಣಕ್ಕೆ ಧರಣಿ, ಪ್ರತಿಭಟನೆ ಹಾಗೂ ಪಾದಯಾತ್ರೆಗಳನ್ನು ನಡೆಸಲಾಗಿತ್ತು. ಹೀಗಾಗಿ ಯಡಿಯೂರಪ್ಪ ಹೆಸರನ್ನೇ ಇಡಬೇಂದು ವಾದ ಮಾಡುವವರೂ ಇದ್ದಾರೆ.
ಇದೆಲ್ಲಕ್ಕೂ ಮೇಲಾಗಿ ಬೇರಾವುದೂ ವ್ಯಕ್ತಿಗಳ ಹೆಸರು ಬೇಡ. ಆಡು ಮಾತಿನಲ್ಲಿ ಈಗಾಗಲೇ ಸಿಗಂದೂರು ಸೇತುವೆ ಎಂದು ಕರೆಯಾಲಾಗುತ್ತಿದೆ. ಅಕಸ್ಮಾತ್ ಯಾವುದೇ ವ್ಯಕ್ತಿಯ ನಾಮಕರಣ ಮಾಡಿದರು ಜನರ ಬಾಯಲ್ಲಿ ಸಿಗಂದೂರು ಸೇತುವೆ ಎಂದೇ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಇದರಿಂದಾಗಿ ಅದೇ ಹೆಸರನ್ನು ಅಧಿಕೃತಗೊಳಿಸುಬೇಕು ಎನ್ನುವವರ ಸಂಖ್ಯೆ ಬಹುದೊಡ್ಡದಿದೆ. ಇದಕ್ಕೆ ಪೂರಕವಾಗಿ ಸಿಗಂದೂರು ಸೇತುವೆ ಎನ್ನುವುದೇ ಸೂಕ್ತ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.