
ಶೃಂಗೇರಿ: ಸಂಸ್ಕೃತವು ಎಲ್ಲಾ ರೀತಿಯ ಜ್ಞಾನದ ಆಗರವಾಗಿದೆ. ಆಧುನಿಕ ಯುಗದಲ್ಲಿ ಮನುಷ್ಯನು ತನ್ನ ಅಪಾರಮೇಧಾ ಶಕ್ತಿಯಿಂದ ಯಾವುದನ್ನೆಲ್ಲ ಕಂಡು ಹಿಡಿದರೂ ಕೂಡ ಆಧ್ಯಾತ್ಮದ ಜ್ಞಾನಕ್ಕಾಗಿ ಭಾರತೀಯ ಆಧ್ಯಾತ್ಮ ಶಾಸ್ತ್ರವನ್ನೇ ಆಶ್ರಯಿಸಬೇಕಾಗುತ್ತದೆ. ಪರಂಪರಾಗತವಾದ ಭಾರತೀಯ ಶಾಸ್ತ್ರಗಳಲ್ಲಿ ಮಾತ್ರವೇ ಐಹಿಕ ಮತ್ತು ಪರಲೌಕಿಕವಾದ ಶ್ರೇಯಸ್ಸನ್ನು ಪ್ರತಿಪಾದಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಪರಮ ಪುರುಷಾರ್ಥದ ಸಾಧನೆಯು ಸಂಸ್ಕೃತ ಮತ್ತು ಶಾಸ್ತ್ರಗಳ ಅಧ್ಯಯನ ಮಾತ್ರದಿಂದಲೇ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಕೃತ ವಿದ್ಯಾರ್ಥಿಗಳು ಶಾಸ್ತ್ರದ ಅಧ್ಯಯನದ ಜೊತೆಗೆ ಸಮಾಜದಲ್ಲಿ
ಭಾರತೀಯ ವಿದ್ಯೆಗಳನ್ನು ಪ್ರಚಾರ ಮಾಡುವ ಕಾರ್ಯವನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿತರೆ ಮಾತ್ರ ಆ ವಿದ್ಯೆಗೆ ಬೆಲೆ ಬರುತ್ತದೆ ಎಂಬುದಾಗಿ ದಕ್ಷಿಣಾಮ್ನಾಯ ಶಾರದಾಪೀಠದ ಶ್ರೀವಿಧುಶೇಖರ ಭಾರತೀ ಸ್ವಾಮಿಗಳು ತಿಳಿಸಿದರು. ಅವರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶ್ರೀ ಭಾರತೀ ತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರದ ಸಂಸ್ಕೃತೋತ್ಸವವನ್ನು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದ್ದಾರೆ.
ಜಗದ್ಗುರುಗಳಾದ ಭಾರತೀತೀರ್ಥ ಮಹಾಸ್ವಾಮಿಗಳ ಹೆಸರಿನಲ್ಲಿ ಶಾಸ್ತ್ರದ ಉನ್ನತ ಅಧ್ಯಯನಕ್ಕಾಗಿ ಆರಂಭಗೊಳ್ಳುತ್ತಿರುವ ‘ಭಾರತೀತೀರ್ಥಶಾಸ್ತ್ರ ಸಮುತ್ಕರ್ಷ ಕೇಂದ್ರ’ದ ರೂಪದಲ್ಲಿ ಪರಿಸರವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಅವರು ಆಶೀರ್ವದಿಸಿದರು .
ಸಂಸ್ಕೃತೋತ್ಸವದ ಅಂಗವಾಗಿ ಗುರುಭವನದಲ್ಲಿ ಆಯೋಜಿಸಲ್ಪಟ್ಟಿದ್ದ ಕಾರ್ಯಕ್ರಮದಲ್ಲಿ ‘ವಾಕ್ಯಾರ್ಥಭಾರತಿ’ ಎಂಬ ಶೋಧ ಪತ್ರಿಕೆಯನ್ನು ಜಗದ್ಗುರುಗಳು ಲೋಕಾರ್ಪಣೆಗೊಳಿಸಿದರು.
ಭಾರತೀತೀರ್ಥ ಶಾಸ್ತ್ರಸಮುತ್ಕರ್ಷ ಕೇಂದ್ರದ ನಿದೇರ್ಶಕರಾದ ಪ್ರೊ. ಹಂಸಧರಝಾ ಅವರು ಸ್ವಾಗತವನ್ನು ಕೋರಿದರು. ಉಪನಿರ್ದೇಶಕರಾದ ಪ್ರೊ.ಚಂದ್ರಕಾಂತ್ ಅವರು ಧನ್ಯವಾದವನ್ನು ಅರ್ಪಿಸಿದರು. ಪ್ರೊ. ಹರಿಪ್ರಸಾದ್ ಅವರು ಕಾರ್ಯಕ್ರಮದ ಸಂಚಾಲನೆಯನ್ನು ನೀಡಿದ್ದಾರೆ.
ಸಂಸ್ಕೃತೋತ್ಸವದ ನಿಮಿತ್ತ ಇಡೀ ಒಂದು ವಾರ ಭಾರತೀತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಸ್ಕೃತೋತ್ಸವದ ಸಮಾರೋಪ ಸಮಾರಂಭವು ಶನಿವಾರ ೯ನೇ ತಾರೀಕು ನಡೆಯಲಿದೆ.