
ಸುಮಾರು 800 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ, ಆಧ್ಯಾತ್ಮಿಕ ನೆಲೆಯ ಮುಖ್ಯ ದೇವತೆಯಾದ ಮಂಜುನಾಥೇಶ್ವರನು ಶಿವಲಿಂಗದ ರೂಪ ತಾಳಿ ಧರ್ಮಸ್ಥಳವನ್ನು ಪರಿಶುದ್ಧಗೊಳಿಸಿದ್ದಾನೆ ಎಂಬ ನಂಬಿಕೆಯಿದೆ. ಇಲ್ಲಿಗೆ ತಮ್ಮ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ ಪೂಜೆ, ಸಂಕಲ್ಪ, ಹರಕೆಗಳನ್ನು ಹೊತ್ತು ದಿನನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಹೀಗೆ ಬಂದ ಭಕ್ತರನ್ನು ಬರಿಗೈಲಿ ಎಂದಿಗೂ ಮಂಜುನಾಥ ಕಳಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು, ಹೀಗೆ ಮಂಜುನಾಥನನ್ನು ನಂಬಿ ಲಾರಿಯನ್ನು ಕೊಂಡುಕೊಂಡಿದ್ದ ಭಕ್ತ ಇದೀಗ ದೊಡ್ಡ ಉದ್ಯಮಿ. ಹೌದು, 2002ರಲ್ಲಿ ಸಿದ್ದಾಪುರದ ಬಿ. ನಾಗು ಕುಲಾಲ ಎಂಬುವವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸ್ಮರಿಸಿ, ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಶ್ರೀ ಮಂಜುನಾಥನ ಹೆಸರಿನಲ್ಲಿ ಒಂದು ಲಾರಿಯನ್ನು ಖರೀದಿಸಿದ್ದರು, ಲಾರಿ ಖರೀದಿಸುವಾಗಲೇ ಇದನ್ನು ಕ್ಷೇತ್ರಕ್ಕೆ ಸಮರ್ಪಿಸುತ್ತೇನೆಂಬ ಸಂಕಲ್ಪ ಕೂಡ ಮಾಡಿದ್ದರು. ಅದರಂತೆ ಅಂದಿನಿಂದ ಅವರ ಅದೃಷ್ಟವೇ ಬದಲಾಯಿತು. ಮೊದಲು ಕೆಂಪು ಕಲ್ಲು ಕೋರೆಯಲ್ಲಿ ಕಲ್ಲು ಕಡಿಯುವ ಕೆಲಸವನ್ನು ಮಾಡುತ್ತಿದ್ದ ನಾಗು ಕುಲಾಲರವರು ಇದೀಗ ಸ್ವಂತವಾಗಿ ಕಲ್ಲು ಕೋರೆಯನ್ನು ಆರಂಭಿಸಿದ್ದಾರೆ ಜೊತೆಗೆ ಅವರ ಬಳಿ 4 ಲಾರಿ 2 ಜೆಸಿಬಿ ಸೇರಿದಂತೆ 6 ವಾಹನಗಳಿವೆ. ಇದೀಗ ಉತ್ತಮ ಸ್ಥಿತಿಯಲ್ಲಿರುವ ಮೊದಲ ಲಾರಿಯನ್ನು ಸಂಪೂರ್ಣವಾಗಿ ಪೈಂಟಿಂಗ್ ಮಾಡಿ ದೀಪಾವಳಿ ಅಮವಾಸ್ಯೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೊಡುಗೆ ನೀಡಿದ್ದಾರೆ. ದೇವರ ಆಶಿರ್ವಾದ, ಉತ್ತಮ ಪರಿಶ್ರಮವಿದ್ದರೆ ಎಂಥವರೂ ಕೂಡ ಉತ್ತಮ ಸ್ಥಿತಿಗೆ ತಲುಪುತ್ತಾರೆ ಎಂಬುದಕ್ಕೆ ಬಿ. ನಾಗು ಕುಲಾಲ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು.