
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ 30 ವರ್ಷಗಳ ಬಳಿಕ ಆರಂಭವಾದರೂ, ವರ್ಷಗಟ್ಟಲೆ ಕಳೆದರೂ ಇದು ಇನ್ನೂ ಪೂರ್ಣವಾಗಿಲ್ಲ. ರಾಜ್ಯ ಸರ್ಕಾರದ ಆದೇಶದ ನಂತರ, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಬಹುದಾದ ಪ್ರದೇಶಗಳ ಬಗ್ಗೆ ಅಧಿಕಾರಿಗಳ ತಂಡದಿಂದ ಸರ್ವೇ ಆಗಿದ್ದು, 9 ಗ್ರಾಮ ಪಂಚಾಯಿತಿಗಳ 19 ಹಳ್ಳಿಗಳನ್ನು ಸೇರಿಸುವ ವರದಿ ಕೂಡ ಸಿದ್ದವಾಯಿತು. ಆದರೆ ಈ ವರದಿಯಲ್ಲಿ ನಗರಕ್ಕೆ ಹೊಂದಿಕೊಂಡ ಬಸವನಗಂಗೂರು ಗ್ರಾಮ ಸೇರಿ ಹಲವಾರು ವಸತಿ ಬಡಾವಣೆಗಳನ್ನು ಕೈಬಿಟ್ಟಿರುವುದರಿಂದ ನಾಗರೀಕರಿಂದ ಆಕ್ಷೇಪಗಳು ವ್ಯಕ್ತವಾಗಿದ್ದು, ತಮ್ಮ ಬಡಾವಣೆಗಳನ್ನೂ ಪಾಲಿಕೆ ವ್ಯಾಪ್ತಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮೇ ತಿಂಗಳಲ್ಲಿ ಸಭೆ ನಡೆಸಿ ವರದಿ ಎರಡು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿದರೂ, ಎರಡು ತಿಂಗಳಾದರೂ ವರದಿ ಸಲ್ಲಿಸದಿರುವ ಪಾಲಿಕೆ ಆಡಳಿತ, ಡಿಸಿ ಕಚೇರಿಯ ಆದೇಶಕ್ಕೂ ಗಮನ ನೀಡದೆ ನಿರ್ಲಕ್ಷ್ಯ ತೋರಿದ್ದು, ಪ್ರಕ್ರಿಯೆ ಸಂಪೂರ್ಣ ನೆನೆಗುದಿಗೆ ಬೀಳುತ್ತಿರುವುದಕ್ಕೆ ಕಾರಣವಾಗಿದೆ. ಈಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ವಿಚಾರಕ್ಕೆ ತಕ್ಷಣ ಗಮನಹರಿಸಿ, ವೈಜ್ಞಾನಿಕವಾಗಿ ಶೇಖರಿಸಿದ ವರದಿಯ ಮೇರೆಗೆ ನಗರಕ್ಕೊಂದಿಕೊಂಡ ಎಲ್ಲ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ನಿಖರ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.