ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯದ ಎತ್ತಿನಹೊಳೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಾತ್ಕಾಲಿಕ ತಡೆಯನ್ನು ನೀಡಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿ ದಕ್ಷಿಣ ಕರ್ನಾಟಕದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಇರುವ ಎತ್ತಿನಹೊಳೆ ಯೋಜನೆಯ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಅಕ್ಟೋಬರ್ 27ರಂದು ನಡೆದ ಕೇಂದ್ರ ಪರಿಸರ ಇಲಾಖೆ ಸಭೆಯಲ್ಲಿ ಯೋಜನೆಯ ಮೊದಲ ಹಂತದ ಬಗ್ಗೆ ಅನೇಕ ಆರೋಪಗಳ ಬಗ್ಗೆ ಸಲಹಾ ಸಮಿತಿ ತಿಳಿಸಿದೆ. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ 54 ಹೆಕ್ಟೇರ್ ಅರಣ್ಯ ಜಾಗವನ್ನು ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಬಳಕೆ ಮಾಡುವ ವಿಷಯವನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ. ಈ ಯೋಜನೆಗೆ 15,000 ಕ್ಕೂ ಅಧಿಕ ಮರಗಳು ಕಡಿಯಲ್ಪಡುತ್ತದೆ. ಅಂತಹ ಮರಗಳಲ್ಲಿ ಹಲವು ವಿಶ್ವದ 34 ಜೀವವೈವಿಧ್ಯ ಕೇಂದ್ರಗಳಲ್ಲಿ ಒಂದಾದ ಪಶ್ಚಿಮ ಘಟ್ಟಕ್ಕೆ ಮಾತ್ರ ಸೀಮಿತವಾಗಿದೆ. ಅಪರೂಪದ ಪ್ರಾಣಿ ಸಂಕುಲಕ್ಕೆ ಹಾನಿಯಾಗುತ್ತದೆ ಹಾಗೂ ಭೂಸವಕಳಿ, ಭೂಕುಸಿತಕ್ಕೂ ಕಾರಣವಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಎಚ್ಚರಿಸಲಾಗಿದೆ.
