
ತಿರುವನಂತಪುರಂ: ಫೆಂಗಲ್ ಚಂಡಮಾರುತದ ಪರಿಣಾಮ ಕೇರಳದಲ್ಲೂ ಭಾರೀ ಮಳೆಯಾಗುತ್ತಿದೆ. ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಶಬರಿಮಲೆಗೆ ಅರಣ್ಯದ ದಾರಿ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ನಿಷೇಧ ಹೇರಲಾಗಿದೆ. ಪುಲ್ಲುಮೇಡುವಿನಿಂದ ಶಬರಿಮಲೆಗೆ 6 ಕಿ.ಮೀ ದೂರ ಇದೆ. ಭಾನುವಾರದಿಂದ ಈ ಅರಣ್ಯ ದಾರಿಯಲ್ಲಿ ದಟ್ಟ ಮಂಜು ಆವರಿಸಿದೆ. ಜೊತೆಗೆ ಭಾರಿ ಮಳೆಯಿಂದ ಭೂಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಅರಣ್ಯ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕಾಲ್ನಡಿಗೆ ಯಾತ್ರಿಕರು ನೀಲಕ್ಕಲ್-ಪಂಪಾ ಮೂಲಕ ಶಬರಿಮಲೆಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಅರಣ್ಯ ಮಾರ್ಗದ ಮೂಲಕ ಆಗಮಿಸಿದ್ದ ಭಕ್ತರನ್ನು ವಿಶೇಷ ಕೆಎಸ್ಆರ್ಟಿಸಿ ಬಸ್ ಮೂಲಕ ಪಂಪಾಗೆ ಕರೆದೊಯ್ಯಲಾಗಿದೆ. ಇನ್ನೂ ಭಾರೀ ಮಳೆಯ ಹಿನ್ನೆಲೆ ಕೇರಳದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರವಾಹ ಉಂಟಾಗುವ ಪ್ರದೇಶದಲ್ಲಿ ನೆಲೆಸಿರುವವರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.