
ಭಾರತೀಯ ಇತಿಹಾಸದಲ್ಲಿ ಸ್ವರಾಜ್ಯ ಸ್ಥಾಪಿಸಿ ತಮ್ಮ ಶ್ರೇಷ್ಠ ವ್ಯಕ್ತಿತ್ವ, ಸಾಹಸ, ಧೈರ್ಯ, ವೀರತ್ವ, ಶಕ್ತಿತ್ವ, ಆಡಳಿತ ನೈಪುಣ್ಯ, ರಕ್ಷಣಾ ಸಾಮರ್ಥ್ಯ ಹಾಗೂ ಧಾರ್ಮಿಕ ಸಹಿಷ್ಣುತೆಯಿಂದ ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಮಹಾನ್ ನಾಯಕರು ಶಿವಾಜಿ ಮಹಾರಾಜ್; ಅವರ ಹೆಸರು ಕೇಳಿದ ಕ್ಷಣದಲ್ಲೇ ರೋಮಾಂಚನ, ಆತ್ಮಾಭಿಮಾನ, ವಿಶ್ವಾಸ, ಶಿಸ್ತು, ಸಂಯಮ, ಸಾಹಸ, ಕರುಣೆ, ಪ್ರೀತಿ ಹಾಗೂ ಸ್ವರಾಜ್ಯದ ಸಂಕಲ್ಪ ಮೂಡುತ್ತದೆ. 1627 ಫೆಬ್ರವರಿ 19ರಂದು ಶಿವನೇರಿಯಲ್ಲಿ ಜನಿಸಿದ ಅವರು ತಂದೆ ಶಹಾಜಿ ಮತ್ತು ತಾಯಿ ಜೀಜಾಬಾಯಿ ಅವರ ಸಂಸ್ಕಾರಗಳಿಂದ ಪ್ರೇರಿತವಾಗಿ ಬಾಲ್ಯದಲ್ಲಿಯೇ ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಆದರ್ಶಗಳನ್ನು ಅಳವಡಿಸಿಕೊಂಡು ಗುರು ದಾದಾಜಿ ಕೊಂಡದೇವ ಹಾಗೂ ಸಂತ ರಾಮದಾಸ್-ತುಕಾರಾಂರ ಪ್ರಭಾವದಲ್ಲಿ ಸ್ವರಾಜ್ಯದ ಕನಸನ್ನು ಬೆಳೆಸಿದರು; ಮಾವಳಿಯರ ಸಹಕಾರದಿಂದ ತೋರಣಕೋಟೆಯನ್ನು ವಶಪಡಿಸಿಕೊಂಡು ಅನೇಕ ಕೋಟೆಗಳನ್ನು ಗೆದ್ದು ಗೆರಿಲ್ಲಾ ಯುದ್ಧತಂತ್ರದ ಮೂಲಕ ಬಿಜಾಪುರದ ಆದಿಲ್ ಶಾಹಿ ಹಾಗೂ ಮೊಘಲ್ ಸಾಮ್ರಾಜ್ಯದ ವಿರುದ್ಧ ಶೌರ್ಯ ಪ್ರದರ್ಶಿಸಿದರು, ಅಫ್ಜಲ್ ಖಾನ್ ವಿರುದ್ಧದ ವಿಜಯ, ಶಾಯಿಸ್ತಾ ಖಾನ್ ಮೇಲೆ ದಿಡೀರ್ ದಾಳಿ ಹಾಗೂ ಆಗ್ರಾದ ಬಂಧನದಿಂದ ತಂತ್ರದಿಂದ ಪಾರಾದ ಘಟನೆಗಳು ಅವರ ಧೈರ್ಯಕ್ಕೆ ಸಾಕ್ಷಿ; 1674 ಜೂನ್ 6ರಂದು ಪಟ್ಟಾಭಿಷೇಕಗೊಂಡು ‘ಛತ್ರಪತಿ’ ಬಿರುದಿನೊಂದಿಗೆ ಕೇಂದ್ರ-ಪ್ರಾಂತೀಯ ಆಡಳಿತ, ಕಂದಾಯ, ನ್ಯಾಯಾಂಗ, ಶಕ್ತಿಶಾಲಿ ಸೈನ್ಯ ಹಾಗೂ ನೌಕಾಪಡೆಯ ನಿರ್ಮಾಣದ ಮೂಲಕ ಆದರ್ಶ ರಾಜ್ಯವನ್ನು ಕಟ್ಟಿದರು. ಮಾತೃಭಕ್ತಿ, ಗುರುಭಕ್ತಿ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾದ ಅವರ ಜೀವನದಿಂದ ಪ್ರೇರಣೆ ಪಡೆದು ಸಮೃದ್ಧ ಮತ್ತು ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ನಾವು ಸಂಕಲ್ಪ ಮಾಡೋಣ
ಸುರೇಶ್ ಎನ್ ಋಗ್ವೇದಿ
ಉಪನ್ಯಾಸಕರು
ಅಧ್ಯಕ್ಷರು., ಜೈಹಿಂದ್ ಪ್ರತಿಷ್ಠಾನ
ಚಾಮರಾಜನಗರ.




