
ಸಾಗರ: ಪಂಪ್ಡ್ ಸ್ಟೋರೇಜ್ಗಾಗಿ ರೈತರ 8.32 ಎಕರೆ ಭೂಮಿ ಸ್ವಾಧೀನ ಪಡೆಸಿಕೊಳ್ಳುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ರೈತರು ತಾಲ್ಲೂಕಿನ ಶರಾವತಿ ಪಂಪ್ಡ್ ಸ್ಟೋರೇಜ್ ಕಾಮಗಾರಿಗಾಗಿ ಭೂಮಿಯನ್ನು ಬಿಟ್ಟು ಕೊಡಲು ಒಪ್ಪಿದ್ದು. ಕೆಲವು ಬೇಡಿಕೆಗಳನ್ನು ಮನವಿ ಮೂಲಕ ನೀಡಿದ್ದು. ಮಾತುಕತೆಯ ಮುಖಾಂತರ ಅದನ್ನು ಪೂರೈಸಲಾಗುವುದು ಎಂದಿದ್ದಾರೆ.
ಶುಕ್ರವಾರ ಸಾಗರ ಉಪವಿಭಾಗಾಧಿಕಾರಿ ಸಭಾಂಗಣದಲ್ಲಿ ಶರಾವತಿ ಅಂತರ್ಗತ ಭೂವಿದ್ಯುತ್ ಯೋಜನೆ ವ್ಯಾಪ್ತಿಗೆ ಒಳಪಡುವ ಹೆನ್ನಿ ಭಾಗದ ರೈತರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಈ ಕಾಮಗಾರಿಯಿಂದ ಬೃಹತ್ ಪ್ರಮಾಣದ ಕಾಡು ನಾಶವಾಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. 54ಹೆಕ್ಟೇರ್ ಅರಣ್ಯ ಭೂಮಿ ಜೊತೆಗೆ 20 ರೈತ ಕುಟುಂಬದ 8.32 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳಲಾಗುತ್ತದೆ. ಸುಮಾರು 2 ಸಾವಿರ ಮೆ. ವಾ ವಿದ್ಯತ್ ಯೋಜನೆಯಡಿ ಅಣೆಕಟ್ಟು ನಿರ್ಮಿಸದೆ ಉತ್ಪಾದನೆ ಮಾಡುವ ಅಪರೂಪದ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ.
ಕಾನೂನು ಪ್ರಕಾರವೇ ಎಲ್ಲಾ ಚಟುವಟಿಕೆಗಳು ನಡೆಯಲಿದ್ದು. ಪರಿಸರ ನಾಶವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದಿಂದ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುವುದು. ರೈತರು ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಸಲ್ಲಿಸಿದ್ದಾರೆ. ಅದನ್ನು ಪೂರಕವಾಗಿ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭರವಸೆ ನೀಡಿದರು. ರೈತರಿಗೆ ಬದಲಿ ಭೂಮಿ ಕೊಡುವ ಜೊತೆಗೆ ಉದ್ಯೋಗ ಕಲ್ಪಸಿಕೊಡುವ ಬಗ್ಗೆ ಗಮನ ನೀಡಲಾಗುವುದು ಎಂದರು.
ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು, ಇಂಧನ ಸಚಿವ ಕೆ.ಜೆ. ಜಾರ್ಜ್ ಮುಂದಿನ ಪೀಳಿಗೆ ವಿದ್ಯುತ್ ಸಮಸ್ಯೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಮಂಜೂರು ಮಾಡಿದ್ದಾರೆ. ಅರಣ್ಯ ನಾಶವಾದರೆ ಅದಕ್ಕೆ ಪರ್ಯಾಯ ಅರಣ್ಯವನ್ನು ಬಳೆಸುವ ನಿಟ್ಟಿನಲ್ಲಿ ಗಮನ ನೀಡಲಾಗುವುದು ಎಂದಿದ್ದಾರೆ. ಹೆದ್ದಾರಿ ಸೇರಿ ಹಲವು ಯೋಜನೆಯ ಸಮಯದಲ್ಲಿ ಅಲ್ಪಸ್ವಲ್ಪ ಕಾಡು ನಾಶವಾಗುತ್ತದೆ. ಆದ್ದರಿಂದ ಉತ್ತಮ ಯೋಜನೆಯನ್ನು ಕೈಬಿಡಲು ಸಾಧ್ಯವಿಲ್ಲ. ಶೀಘ್ರವೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಅನುಷ್ಟಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರೊಬೇಷನರಿ ಜಿಲ್ಲಾಧಿಕಾರಿ ನಾಗೇಂದ್ರ ಕುಮಾರ್, ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ಟಿ.ಪಿ ರಮೇಶ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಅರಣ್ಯ ಇಲಾಖೆಯ ರವಿಕುಮಾರ್ ಇತರರು ಉಪಸ್ಥಿತರಿದ್ದರು.