
ಚಿಕ್ಕಮಗಳೂರು: ನಗರದ ರಂಗಣ್ಣನ ಛತ್ರದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ವೇಳೆ ಇಬ್ಬರು ಮಂಗಳಮುಖಿಯರು ಮದುವೆ ಮನೆಗೆ ನುಗ್ಗಿ ಹಣಕ್ಕಾಗಿ ಗಲಾಟೆ ನಡೆಸಿದ ಘಟನೆ ನಡೆದಿದೆ. ಮದುವೆ ಮನೆಯವರು ರೂ.500 ನೀಡಿದರೂ, ರೂ.10 ಸಾವಿರ ನೀಡಬೇಕು ಎಂದು ಒತ್ತಾಯಿಸಿ ವಧು–ವರರ ಮುಂದೆಯೇ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊಟ್ಟಷ್ಟು ಪಡೆದು ತೆರಳಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದರೂ ಕೇಳದೇ ಅವಾಚ್ಯ ಶಬ್ದಗಳನ್ನು ಬಳಸಿ ಮಂಟಪದಲ್ಲೇ ಕಿರುಚಾಟ ನಡೆಸಿ ಸಂಭ್ರಮದ ವಾತಾವರಣಕ್ಕೆ ಧಕ್ಕೆಯುಂಟು ಮಾಡಿದ್ದಾರೆ ಎನ್ನಲಾಗಿದೆ. ಹಣ ನೀಡಲು ಯೋಗ್ಯತೆ ಇಲ್ಲವೇ ಎಂದು ನಿಂದನೆ ಮಾಡಿದ್ದು, ಪ್ರಶ್ನಿಸಿದವರನ್ನು ಹೊರಗೆ ಬಂದು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.




