
ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎ ತೃತೀಯ ವರ್ಷದ ವಿದ್ಯಾರ್ಥಿನಿಯಾಗಿರುವ ರೆಮೋನಾ ಎವೆಟ್ಟೆ ಪಿರೇರಾ, ಜುಲೈ 21 ರಿಂದ 28 ರವರೆಗೆ 7 ದಿನಗಳ ಕಾಲ 170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾರೆ. ಈ ಮೂಲಕ ಅವರು 2023 ರಲ್ಲಿ ಸೃಷ್ಟಿ ಸುಧೀರ್ ಜಗತಪ್ ಸಾಧಿಸಿದ್ದ 127 ಗಂಟೆಗಳ ಹಿಂದಿನ ದಾಖಲೆ ಮುರಿದಿದ್ದಾರೆ. ಮೂರು ಗಂಟೆಗೆ 15 ನಿಮಿಷಗಳಷ್ಟು ಮಾತ್ರ ವಿಶ್ರಾಂತಿ ಪಡೆದು, ಹಗಲು-ರಾತ್ರಿ ಎಂಬ ಭೇದವಿಲ್ಲದೆ ರೆಮೋನಾ ಈ ಸಾಧನೆ ನೆರವೇರಿಸಿದ್ದು ವಿಶೇಷ. ಈ ಪ್ರಯಾಣದಲ್ಲಿ ತಾಯಿ ಗ್ಲಾಡಿಸ್ ಪಿರೇರಾ ಮತ್ತು ಅಣ್ಣ ರೊನಾಲ್ಡ್ ರಾಕ್ಸನ್ ಅವರು ಆಕೆಗೆ ಸಂಪೂರ್ಣ ಬೆಂಬಲ ನೀಡಿದರೆ, ಡಾ. ಶ್ರೀವಿದ್ಯಾ ಮುರಳೀಧರ್ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಕಳೆದ 17 ವರ್ಷಗಳಿಂದ ಭರತನಾಟ್ಯದಲ್ಲಿ ಶ್ರಮಿಸುತ್ತಿರುವ ರೆಮೋನಾ ಅನೇಕ ಟಿವಿ ಶೋಗಳಲ್ಲಿ ತಿರುಗಿ ಮೆರೆದಿದ್ದಾರೆ. ಭರತನಾಟ್ಯ ಮಾತ್ರವಲ್ಲದೆ, ಕ್ಲಾಸಿಕಲ್, ಫೋಕ್, ಹಿಪ್-ಹಾಪ್, ಬಾಲಿವುಡ್ ಸೇರಿದಂತೆ ಹಲವು ನೃತ್ಯ ಶೈಲಿಗಳನ್ನು ಮಾಡಿದ ರೆಮೋನಾ, ಗ್ಲಾಸ್ ಅಥವಾ ಸೂಜಿಗಳ ಮೇಲೆ ನೃತ್ಯ ಮಾಡುವಂತೆ ಅಪರೂಪದ ಕೌಶಲ್ಯವನ್ನೂ ಪ್ರದರ್ಶಿಸುತ್ತಾರೆ. ಅವರ ಈ ಸಾಧನೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುತ್ತಿದ್ದು, ನೃತ್ಯ ಕಲೆಗೆ ತಾವು ಸಲ್ಲಿಸಿದ ಬದ್ಧತೆಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೃತ್ಯ ಮಾಡುವಾಗ ಸಹಾಯಾಸವನ್ನು ಮರೆತು ನಗು ಮುಖದಿಂದ ನೃತ್ಯ ಮಾಡುತ್ತಿರುವ ರೆಮೋನಾ ನಿಜಕ್ಕೂ ಸ್ಪೂರ್ತಿದಾಯಕ ಎಂದು ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಕ್ರಿಸ್ಟೋಫರ್ ಅವರು ಪ್ರಶಂಸಿಸಿದ್ದಾರೆ.