
ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. ವಾರ ಪೂರ್ತಿಯಾಗಿ ಇದೇ ರೀತಿ ಮಳೆಯಾಗುವುದಾಗಿ ಹವಮಾನ ಇಲಾಖೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಕಳೆದ 3 ದಿನಗಳಿಂದ 10 ಸೆಂ.ಮೀ ಮಳೆ ಸುರಿದರೆ, ಮಲೆನಾಡು ವ್ಯಾಪ್ತಿಯ ಪ್ರದೇಶದಲ್ಲಿ 5 ಸೆಂ.ಮೀ ಮಳೆಯಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅಡವಿ ಖಾನಾಪುರದಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿದಿದ್ದು, ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಶಾಲಾ ಮಕ್ಕಳು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.