
ಕರ್ನಾಟಕ:ಅಬ್ಬಾ ಮಳೆಗಾಲ ಮುಗೀತು ಇನ್ನೂ ಚಳಿಗಾಲ ಆರಂಭವಾಯಿತು ಅನ್ನೋವಷ್ಟರಲ್ಲಿ ಫೆಂಗಲ್ ಚಂಡಮಾರುತದಿಂದಾಗಿ ಚುಮು ಚುಮು ಚಳಿ ಮಾಯವಾಗಿ ಮಳೆರಾಯ ಹಾಜರಾಗಿದ್ದ. ಇದೀಗ ಮೋಡ, ಬಿಸಿಲು ಇದೆಯೇ ಹೊರತು ಚಳಿಯ ಸುಳಿವೇ ಇಲ್ಲ. ಈ ವರ್ಷ ಮಳೆಗಾಲ ಮುಗಿಯುವ ಸುಳಿವು ಕಾಣುತ್ತಿಲ್ಲ. ಇನ್ನೂ ರಾಜ್ಯದಾದ್ಯಂತ ಡಿಸೆಂಬರ್ 10ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಹಲವೆಡೆ ಮಳೆಯಾಗಲಿದೆ. ಫೆಂಗಲ್ ಚಂಡಮಾರುತ ದುರ್ಬಲವಾಗಿದ್ದರೂ ಅದರ ಪ್ರಭಾವ ಮಾತ್ರ ಕಡಿಮೆಯಾಗಿಲ್ಲ. ಹವಾಮಾನ ವರದಿ ಪ್ರಕಾರ, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ ಅತೀ ಹೆಚ್ಚು 26 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಮಂಗಳೂರಿನಲ್ಲಿ 19, ಪಣಂಬೂರು 18, ಕಾರ್ಕಳ 15, ಉಡುಪಿ 14, ಕೋಟ 13, ಭಾಗಮಂಡಲ, ಮದ್ದೂರು ಹಾಗೂ ಬೆಳ್ಳೂರಿನಲ್ಲಿ ತಲಾ 9, ಹುಣಸೂರು, ನಾಪೋಕ್ಲು ತಲಾ 6, ಪುತ್ತೂರು, ಮಾಣಿ, ಸುಳ್ಯ, ಸರಗೂರು ಮಂಡ್ಯದಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.