
ಫೆಂಗಲ್ ಸೈಕ್ಲೋನ್ ಅಬ್ಬರಕ್ಕೆ ರಾವಣನ ನಾಡು ಶ್ರೀಲಂಕಾ ತತ್ತರಿಸಿದ್ದು, ಭಾರೀ ಮಳೆ, ಪ್ರವಾಹಕ್ಕೆ ಜನ ಬಳಲಿ ಬೆಂಡಾಗಿದ್ದಾರೆ. ಈಗ ಇದೇ ಚಂಡಮಾರುತ ಭಾರತದ ಕಡೆ ನುಗ್ಗುತ್ತಿದ್ದು, ಪ್ರವೇಶಕ್ಕೂ ಮುನ್ನವೇ ವಿನಾಶ ರೂಪ ತಳೆದಿದೆ. ತಮಿಳುನಾಡು, ಪುದುಚೇರಿಯಲ್ಲಿ ಮಳೆ ಶುರುವಾಗಿದ್ದು, ಜನರು ಆತಂಕದಲ್ಲಿದ್ದಾರೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ಫೆಂಗಲ್ ಚಂಡಮಾರುತದ ವೇಗದಲ್ಲಿ ಕ್ಷಣಕ್ಷಣಕ್ಕೂ ತೀವ್ರ ಸ್ವರೂಪ ಪಡೆಕೊಳ್ಳುತ್ತಿದೆ. ಭಯಾನಕ ರೂಪ ತಾಳಿರುವ ಫೆಂಗಲ್ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದ್ದು, ಪುದುಚೇರಿಯ ಕರಾವಳಿ ಭಾಗಕ್ಕೂ ಅಪ್ಪಳಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಪುದುಚೇರಿ ಹಾಗೂ ಚೆನ್ನೈನ ಸಮುದ್ರ ತೀರಕ್ಕೆ ಇವತ್ತು ಚಂಡಮಾರುತ ಎಫೆಕ್ಟ್ ತೀವ್ರಗೊಳ್ಳಲಿದೆ. ಇದರಿಂದ ಕರಾವಳಿ ಭಾಗದಲ್ಲಿ ಮಧ್ಯಾಹ್ನದ ಹೊತ್ತಿಗೆಗಾಲೇ ಮಳೆ, ಮೈಕೊರೆವ ಚಳಿಯಲ್ಲಿ ಜನ ನಲುಗಬೇಕಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಹೈಅಲರ್ಟ್ ಘೋಷಣೆ ಆಗಿದ್ದು, ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಗೆ ಫೆಂಗಲ್ ನೆರಳು ವಿಮಾನ ಹಾರಾಟದ ಮೇಲೂ ಬಿದ್ದಿದೆ. ಮಂಗಳೂರು, ತಿರುಚ್ಚಿ, ಕೊಯಮತ್ತೂರು, ಭುವನೇಶ್ವರ್, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುವ 13 ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಚಂಡಮಾರುತದ ಪ್ರಭಾವಕ್ಕೆ ಮುಂದಿನ ನಾಲ್ಕೈದು ದಿನ ತಮಿಳುನಾಡು, ಆಂಧ್ರ, ಒಡಿಶಾ, ಕರ್ನಾಟಕದ ವಿವಿಧೆಡೆ ಮಳೆ ಆಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕರಾವಳಿ ರಾಜ್ಯದ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದ್ದು, ಜನ ಜೀವನ ಅಸ್ತವ್ಯಸ್ತವಾಗಲಿದೆ ಎಂಬ ಭಯ ಸ್ಥಳೀಯರನ್ನ ಕಾಡುತ್ತಿದೆ.