
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ದಿಢೀರನೆ ಸುರಿದ ಧಾರಾಕಾರ ಮಳೆಯೊಂದಿಗೆ ಭಾರೀ ಗಾಳಿ ಅಬ್ಬರ ತೋರಿದ ಪರಿಣಾಮ ಮೂಡಿಗೆರೆ ತಾಲೂಕಿನಾದ್ಯಂತ ಹಲವು ಅವಾಂತರಗಳು ಸಂಭವಿಸಿವೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ವಾಹನ ಜಖಂ ಆಗಿದ್ದು, ಕಾರಿನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಮತ್ತೊಂದೆಡೆ ಭಾರೀ ಗಾಳಿಗೆ ತೆಂಗಿನ ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಒಂದು ಬೃಹತ್ ತೆಂಗಿನ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದರೂ ನೆಲಕ್ಕಿಳಿಯದೆ ಅಪಾಯಕರ ಸ್ಥಿತಿಯಲ್ಲಿ ನಿಂತಿದೆ. ಮೂಡಿಗೆರೆ ಪಟ್ಟಣದ ಹೈಸ್ಕೂಲ್ ಕಟ್ಟಡದ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ಬಿದರಹಳ್ಳಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿಯೂ ಹಾನಿಗೊಳಗಾಗಿದೆ. ಚಾರ್ಮಾಡಿ ಘಾಟಿ ತಪ್ಪಲಿನ ಕೊಟ್ಟಿಗೆಹಾರದಲ್ಲಿಯೂ ಭಾರೀ ಮಳೆ ಸುರಿದಿದ್ದು, ಅಚಾನಕ್ ಆಗಿ ಆರಂಭವಾದ ಮಳೆಗೆ ಜನರು ಕಂಗಾಲಾಗಿದ್ದಾರೆ.





