
ಶಿವಮೊಗ್ಗ:ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ರೈಲ್ವೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವರು ಎರ್ನಾಕುಲಂ–ಮಡಗಾಂವ್ ಎಕ್ಸ್ಪ್ರೆಸ್ ರೈಲಿಗೆ “ಮೂಕಾಂಬಿಕಾ ಎಕ್ಸ್ಪ್ರೆಸ್” ಎಂಬ ಹೆಸರನ್ನು ನೀಡಲು ಮತ್ತು ಆ ರೈಲನ್ನು ಪ್ರತಿ ದಿನ ಸಂಚರಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಬೈಂದೂರು ಕ್ಷೇತ್ರದ ಮೂಕಾಂಬಿಕಾ ರಸ್ತೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಬಿಜೂರು ಮತ್ತು ಸೇನಾಪುರ ನಿಲ್ದಾಣಗಳಲ್ಲಿ ಮೆಮು, ಮತ್ಸ್ಯಗಂಧಾ ಮತ್ತು ಪಂಚಗಂಗಾ ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಕೋರಿದ್ದಾರೆ. ಈ ಎಲ್ಲ ಮನವಿಗೆ ಸಚಿವ ವಿ.ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದು ರಾಘವೇಂದ್ರ ಟ್ವೀಟ್ ಮೂಲಕ ತಿಳಿಸಿದ್ದಾರೆ.