
ಕೊಟ್ಟಿಗೆಹಾರ: ಬಣಕಲ್ ಪೊಲೀಸ್ ಠಾಣೆಯ ಜನಸ್ನೇಹಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಡಿ.ವಿ. ರೇಣುಕಾ ಅವರು ಚಿಕ್ಕಮಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಯುವಕರು ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ಕಳೆದ ಎರಡು ವರ್ಷಗಳಿಂದ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಅವರು ಗಾಂಜಾ, ಕಳ್ಳತನ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದ ಅವರು ಗಣಪತಿ ವಿಸರ್ಜನೆ, ಈದ್ ಮಿಲಾದ್, ಚರ್ಚ್ ಉತ್ಸವ ಸೇರಿದಂತೆ ವಿವಿಧ ಮೆರವಣಿಗೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅಚ್ಚುಕಟ್ಟಾದ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು. ಹಗಲು-ರಾತ್ರಿ ಎನ್ನದೆ ಪೊಲೀಸ್ ಸಿಬ್ಬಂದಿಯನ್ನು ಸಮನ್ವಯಗೊಳಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು ಹಾಗೂ ಯುವಕರು ಶುಭಾಶಯ ಕೋರಿ ಬೀಳ್ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸೂರಿ, ಅರುಣ್ ಪೂಜಾರಿ, ರಂಗನಾಥ್, ಆಟೋ ಚಾಲಕರಾದ ಹರೀಶ್, ಕೀರ್ತಿ, ಗಣೇಶ್, ಶಶಿ, ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




