
ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಗಂಭೀರ ಅನುಮಾನಗಳಿಗೆ ಕಾರಣವಾದ ಪ್ರಕರಣ ಬೆಳಕಿಗೆ ಬಂದಿದೆ. ವಸತಿ ಶಾಲೆಯ ಮಕ್ಕಳಿಗೆ ವಿತರಿಸಲು ಬಂದಿದ್ದ ಸುಮಾರು 70 ಗೋಧಿ ಚೀಲಗಳನ್ನು ಭೂಮಿಯ ಸುಮಾರು 10 ಅಡಿ ಆಳದಲ್ಲಿ ಹೂತು ಹಾಕಿರುವುದು ಸಾರ್ವಜನಿಕ ದೂರಿನ ಆಧಾರದಲ್ಲಿ ಗುಂಡಿ ತೆಗೆಸಿದ ವೇಳೆ ಬಯಲಾಗಿದೆ. ಈ ಗೋಧಿ ಚೀಲಗಳನ್ನು ಸುಮಾರು ಎರಡು ವರ್ಷಗಳ ಹಿಂದೆ ಬೇಸಿಗೆಯಲ್ಲಿ ಅಂದಿನ ಪ್ರಾಂಶುಪಾಲ ಹರೀಶ್ ಅವರ ಅವಧಿಯಲ್ಲಿ ಶೇಖರಣೆ ಮಾಡಿ ಬಳಿಕ ಭೂಮಿಯಲ್ಲಿ ಹೂಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಕ್ಕಳಿಗೆ ನೀಡಬೇಕಾದ ಗೋಧಿಯನ್ನು ಚಪಾತಿ ರೂಪದಲ್ಲಿ ಬಳಸದೇ ಇರುವುದು ಪ್ರಶ್ನಾರ್ಹವಾಗಿದ್ದು, 70 ಮೂಟೆಗಳನ್ನು ಏಕೆ ಸಂಗ್ರಹಿಸಿ ಇಡಲಾಗಿತ್ತು, ಅವುಗಳನ್ನು ಅಡಿಗೆಗೆ ಬಳಸಲಿಲ್ಲವೇ ಅಥವಾ ಮಾರಾಟಕ್ಕೆ ಯಾರು ಸಿಗಲಿಲ್ಲವೇ ಎಂಬ ನಾನಾ ಅನುಮಾನಗಳು ವ್ಯಕ್ತವಾಗಿವೆ. ಗೋಧಿ ಹಾಳಾಗಿದೆ, ತಿನ್ನಲು ಯೋಗ್ಯವಲ್ಲ ಎಂಬ ಕಾರಣ ನೀಡಿ ಮೇಲಾಧಿಕಾರಿಗಳ ಗಮನಕ್ಕೆ ತರದೆ ಪ್ರಾಂಶುಪಾಲರು ಸ್ವತಃ ಭೂಮಿಯಲ್ಲಿ ಹೂಳಿಸಿರುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ. ನಿಯಮಾನುಸಾರ ತಿನ್ನಲು ಯೋಗ್ಯವಲ್ಲದ ಆಹಾರವನ್ನು ಫುಡ್ ಇನ್ಸ್ಪೆಕ್ಟರ್ ದೃಢೀಕರಿಸಬೇಕಾಗಿದ್ದರೂ ಅದನ್ನು ಪಾಲಿಸದೇ ಹೂಳಿಸಿರುವುದು ಪ್ರಶ್ನೆ ಹುಟ್ಟಿಸಿದೆ. ಸರ್ಕಾರದಿಂದ ಬಂದ ಗೋಧಿಯೇ ಹಾಳಾಗಿತ್ತೇ ಅಥವಾ ಅದನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಾಗಿತ್ತೇ ಎಂಬ ವಿಚಾರವೂ ಇದೀಗ ತನಿಖೆಗೆ ಒಳಪಟ್ಟಿದ್ದು, ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.





