
ಸಕಲೇಶಪುರ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟದ ಭೈರವೆಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್ ವೇಳೆ ಛಾಯಾಗ್ರಾಹಕರ ಅಸಭ್ಯ ವರ್ತನೆ ಹಾಗೂ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವ ಘಟನೆ ಬಳಿಕ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆದಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯರನ್ನೇ ತಪ್ಪುಗಾರರಂತೆ ಬಿಂಬಿಸಿದ ಘಟನೆಗೆ ಸಂಬಂಧಿಸಿದಂತೆ ಈಗ ವಿವಾದ ತೀವ್ರಗೊಂಡಿದೆ. ಈ ನಡುವೆ ಹಾಸನ ಜಿಲ್ಲಾಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರೂ, ಇತಿಹಾಸ ಪ್ರಸಿದ್ಧ, ಹೊಯ್ಸಳರ ಕಾಲದ ಜೀರ್ಣೋದ್ದಾರ ಹೊಂದಿರುವ ಹಾಗೂ ಪಾಂಡವರ ಕಾಲದ ಕುರುಹುಗಳಿವೆ ಎನ್ನಲಾಗುವ ದೇವಸ್ಥಾನಕ್ಕೆ ಯಾವುದೇ ವಿಶೇಷ ಮನ್ನಣೆ ನೀಡದೆ, ಚಿತ್ರೀಕರಣಕ್ಕೆ ಹಣ ಪಾವತಿಸಿದರೆ ಅನುಮತಿ ನೀಡಬಹುದು ಎಂಬ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಹಾನಬಾಳು ಅಧ್ಯಕ್ಷ ರತನ್ ಮರಗುಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಚಿತ್ರೀಕರಣಕ್ಕೆ 4 ಗಂಟೆಗೆ ₹5000 ಶುಲ್ಕ ನಿಗದಿ ಮಾಡಿರುವುದು ಗ್ರಾಮಸ್ಥರು ಹಾಗೂ ಮನೆದೇವರಾಗಿ ಪೂಜಿಸುವ ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂದೂ ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು “ನಾನು ಬೆಟ್ಟದ ಭೈರವೆಶ್ವರ ಭಕ್ತ, ನನ್ನ ಭಾವನೆಗೆ ಧಕ್ಕೆ ತರಬೇಡಿ” ಎಂಬ ಸಂದೇಶದೊಂದಿಗೆ ದೇವಸ್ಥಾನದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಹಾಗೂ ಫೋಟೋ ಶೂಟ್ ನಿಷೇಧಿಸಬೇಕೆಂದು ಸಾವಿರಾರು ಭಕ್ತರಿಂದ ಪತ್ರ ರವಾನಿಸುವ ಅಭಿಯಾನ ಕೈಗೊಳ್ಳಲಾಗಿದೆ ಎಂದು ವೇದಿಕೆಯ ಉಪಾಧ್ಯಕ್ಷ ಶೇಖರ್ ಕಬ್ಬಿನಗದ್ದೆ ತಿಳಿಸಿದ್ದಾರೆ. ಮುಂದಿನ ಪೀಳಿಗೆಗಾಗಿ ದೇವಸ್ಥಾನದ ಪಾವಿತ್ರ್ಯ ಮತ್ತು ಸಂರಕ್ಷಣೆ ಕಾಪಾಡುವ ಉದ್ದೇಶದಿಂದ ಈ ಪತ್ರ ಅಭಿಯಾನ ನಡೆಸಲಾಗುತ್ತಿದೆ ಎಂದು ಸಂಘಟನೆ ತಿಳಿಸಿದ್ದು, ಈ ವೇಳೆ ಕಾರ್ಯಕರ್ತರಾದ ದೀಪಕ್, ಮಹೇಶ್, ಬೈಕೆರೆ ಬಸವರಾಜು, ಗಣೇಶ್ ಹಾಗೂ ಮುಖಂಡ ದುಷ್ಯಂತ್ ಉಪಸ್ಥಿತರಿದ್ದರು.




