
ಬೆಂಗಳೂರು: ಕೆ.ಆರ್. ನಗರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅತ್ಯಾಚಾರ ಆರೋಪ ಸಾಬೀತಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮನೆಕೆಲಸದ 47 ವರ್ಷದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಅವರು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ, ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪ್ರಜ್ವಲ್ ರೇವಣ್ಣ ದೋಷಿ ಎಂಬ ತೀರ್ಪು ನೀಡಿದರು. ಆರೋಪದ ಆಧಾರವಾಗಿ ಗೂಗಲ್ ಮ್ಯಾಪ್ಸ್ನ ಡೇಟಾ, ಮೊಬೈಲ್ ಫೂಟ್ಪ್ರಿಂಟ್ ಅನ್ನು ಪರಿಗಣಿಸಲಾಗಿದೆ. ಈ ಸಂಬಂಧ ಐಪಿಸಿ ಸೆಕ್ಷನ್ 376(2)(ಎನ್), 376(2)(ಕೆ), 506, 354-ಎ, 354(ಎ), 354(ಬಿ), 354(ಸಿ) ಹಾಗೂ ಐಟಿ ಕಾಯಿದೆ ಸೆಕ್ಷನ್ 66ಇ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡವು 123 ಸಾಕ್ಷ್ಯಗಳೊಂದಿಗೆ 2,000 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದರೆ, ಇನ್ನೂ ಮೂರು ಪ್ರತ್ಯೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಚಾರಣೆಯಲ್ಲಿವೆ. 2024ರ ಮೇ 31ರಂದು ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಕಳೆದ 14 ತಿಂಗಳಿನಿಂದ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದರು.